Chincholi | ಸರಕಾರ ತಕ್ಷಣವೇ ರೈತರ ಹಾಗೂ ಬಡವರ ನೆರವಿಗೆ ಧಾವಿಸಲಿ : ಮುಖಂಡ ಕೆ.ಎಂ.ಬಾರಿ ಆಗ್ರಹ
ಚಿಂಚೋಳಿ: ತಾಲೂಕಿನಲ್ಲಿ ತೀವ್ರ ಬರಗಾಲ ಎದುರಾಗಿದ್ದು, ರೈತರು ಹಾಗೂ ಬಡ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ತಕ್ಷಣವೇ ಚಿಂಚೋಳಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ಜನರ ನೆರವಿಗೆ ಧಾವಿಸಬೇಕು ಎಂದು ಮಾಜಿ ಪುರಸಭೆ ಅಧ್ಯಕ್ಷ ಹಾಗೂ ವಿವಿಧ ಸಂಘಟನೆಗಳ ಒಕ್ಕೂಟದ ಪ್ರಮುಖ ಕೆ.ಎಂ. ಬಾರಿ ಆಗ್ರಹಿಸಿದರು.
ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿರುವುದರಿಂದ ರೈತರಿಗೆ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಕಳೆದ ವರ್ಷ ಅತಿವೃಷ್ಟಿಯಿಂದ ನಷ್ಟ ಅನುಭವಿಸಿದ್ದ ರೈತರು ಈ ಬಾರಿ ಭೀಕರ ಬರಗಾಲದಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದು, ಪ್ರತಿ ಹೆಕ್ಟೇರಿಗೆ ₹25 ಸಾವಿರ ಬರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಪರಿಷ್ಕರಣೆಯ ಹಂತದಲ್ಲಿರುವುದು ಹಾಗೂ 2026ರ ಜನವರಿಯಿಂದ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಯಾಗದಿರುವುದು ಖಂಡನೀಯವಾಗಿದೆ. ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡಿ, ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಚಿಂಚೋಳಿ ತಾಲೂಕಿನಲ್ಲಿ ಸರ್ಕಾರಿ ಬಸ್ ಸೇವೆ ಹದಗೆಟ್ಟಿದ್ದು, ಹಳೆಯ ಹಾಗೂ ದುರಸ್ತಿಯಿಲ್ಲದ ಬಸ್‌ಗಳಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರತಿದಿನ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಚಿಂಚೋಳಿ ಸಾರಿಗೆ ಘಟಕಕ್ಕೆ 25 ಹೊಸ ಬಸ್‌ಗಳನ್ನು ಮಂಜೂರು ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಇದಲ್ಲದೆ, ಜಾನುವಾರುಗಳಿಗೆ ಮೇವು ಒದಗಿಸಬೇಕು, ರೈತರ ಬಾಕಿ ಇರುವ ಬೆಳೆ ವಿಮೆ ಪರಿಹಾರವನ್ನು ಬಿಡುಗಡೆ ಮಾಡಬೇಕು ಹಾಗೂ ಚಿಂಚೋಳಿ ಪುರಸಭೆ ವ್ಯಾಪ್ತಿಯ ಕೆಟ್ಟುಹೋಗಿರುವ ಬೀದಿ ದೀಪಗಳನ್ನು ಕೂಡಲೇ ದುರಸ್ತಿಗೊಳಿಸಬೇಕು ಎಂದು ಸರ್ಕಾರ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶ್ರೀಮಂತ ಕಟ್ಟಿಮನಿ,ಗೋಪಾಲ ಎಂ.ಪಿ. ಗಾರಂಪಳ್ಳಿ,ನಾರಾಯಣ ನಾಟೇಕಾರ, ಅಣವಾರ, ಶ್ರೀನಿವಾಸ ಚಿಂಚೋಳಿಕರ,ನಾಗಪ್ಪ ಚಿಂಚೋಳಿ, ಪೂಜಾರಿ,ಮಲ್ಲಿಕಾರ್ಜುನ,ಅಜೀರುದ್ದೀನ್ ಇನಾಮದಾರ್,ರಾಜಪ್ಪ ಪೂಜಾರಿ,ರಂಗಣ್ಣ ಪೂಜಾರಿ, ಹನುಮಂತ ಕೆ.ಪೂಜಾರಿ, ಯಲ್ಲಾಲಿಂಗ, ಸುಧೀರ, ಶ್ರೀಕಾಂತ ಸೇರಿದಂತೆ ಅನೇಕರು ಇದ್ದರು.