ಕಲಬುರಗಿ | ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಹೋರಾಟಕ್ಕೆ ನವನಿರ್ಮಾಣ ಸೇನೆ ಬೆಂಬಲ
ಕಲಬುರಗಿ: ಇತ್ತಿಚೆಗೆ ಸುರಿದ ಭಾರಿ ಮಳೆಯಿಂದ ಕಲ್ಯಾಣ ಕರ್ನಾಟಕದ ಬಹುತೇಕ ಜಿಲ್ಲೆಗಳ ರೈತರ ಬೆಳೆಗಳು ಸಂಪೂರ್ಣ ಹಾಳಾಗಿದ್ದು, ರೈತರ ಬದುಕು ಬೀದಿಗೆ ಬಂದಿದೆ. ರೈತರ ಬದುಕನ್ನು ಪುನಃ ಕಟ್ಟಿಕೊಡುವಂತೆ ಆಗ್ರಹಿಸಿ, ರೈತರ ಬೆಳೆಗಳಿಗೆ ಶೀಘ್ರವಾಗಿ ಪರಿಹಾರ ಧನ ಬಿಡುಗಡೆಗೆ ಒತ್ತಾಯಿಸಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ನಡೆಸುತ್ತಿರುವ ಧರಣಿ ಸತ್ಯಾಗ್ರಹಕ್ಕೆ ನವನಿರ್ಮಾಣ ಸೇನೆ ಜಿಲ್ಲಾ ಘಟಕದಿಂದ ಬೆಂಬಲಿಸಿದೆ ಎಂದು ಸೇನೆ ಜಿಲ್ಲಾಧ್ಯಕ್ಷ ರವಿ ಎನ್.ದೇಗಾಂವ ಹೇಳಿದರು.
ರಾಜ್ಯದಲ್ಲಿ ಯಾವುದೇ ಸರಕಾರ ಅಧಿಕಾರಕ್ಕೆ ಬಂದರೂ, ಕಲ್ಯಾಣ ಕರ್ನಾಟಕ ಭಾಗದ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿವೆ. ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ರೈತರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿರುವುದು ಈ ಭಾಗದ ರೈತರು ಮರೆತಿಲ್ಲ. ಮೈಸೂರು ಕರ್ನಾಟಕದ ರೈತರ ಆಲೂಗಡ್ಡೆ ಬೆಳೆ ನಾಶವಾದರೆ, ವಿಶೇಷ ಸಂಪುಟ ಸಭೆ ಕರೆದು ಪರಿಹಾರ ಘೋಷಣೆ ಮಾಡುವ ಸರಕಾರಕ್ಕೆ ಈ ಭಾಗದಲ್ಲಿ ಹಾಳಾಗಿರುವ ಬೆಳೆಗಳು ಕಣ್ಣಿಗೆ ಕಾಣದಿರುವುದು ನಾಚಿಕೆಗೇಡು. ಕಲ್ಯಾಣ ಕರ್ನಾಟಕ ಭಾಗದ ರೈತರನ್ನು ಯಾವತ್ತಿಗೂ ಮಲತಾಯಿ ಮಕ್ಕಳಂತೆ ಕಂಡ ಈ ಸರಕಾರಗಳಿಗೆ ನಮ್ಮ ಧಿಕ್ಕಾರವಿದೆ ಎಂದು ಹೇಳಿದರು.
ಪ್ರವಾಹ ವೀಕ್ಷಣೆಯ ನೆಪದಲ್ಲಿ ಫೋಟೋ ಶೂಟ್ ಮಾಡಿಕೊಂಡು ಹೋಗಿರುವ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಾಯಕರುಗಳಿಗೆ ಒಂದು ಎಕರೆ ಎಂದರೆ ಎಷ್ಟು ಗುಂಟೆ ಎನ್ನುವುದೇ ಗೊತ್ತಿಲ್ಲ. ಈ ಭಾಗದ ಮುಗ್ದ ರೈತರನ್ನು ರಾಜಕೀಯ ತೆವಲಿಗಾಗಿ ಎತ್ತಿಕಟ್ಟಿ ತಮ್ಮ ಬೆಳೆ ಬೆಯಿಸಿಕೊಳ್ಳುತ್ತಿರುವ ಸಮಯ ಸಾಧಕ ರಾಜಕಾರಣಿಗಳ ಮಾತಿಗೆ ಮರುಳಾಗದಂತೆ ಕರ್ನಾಟಕ ನವನಿರ್ಮಾಣ ಸೇನೆ ಈ ಭಾಗದ ರೈತರಲ್ಲಿ ಮನವಿ ಮಾಡಿಕೊಳ್ಳುತ್ತದೆ ಎಂದು ತಿಳಿಸಿದರು.
ಸರಕಾರ ಈ ಕೂಡಲೇ ಕಲಬುರಗಿಯಲ್ಲಿ ವಿಶೇಷ ಸಂಪುಟ ಸಭೆ ಕರೆದು, ಈ ಭಾಗದ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಕರ್ನಾಟಕ ನವನಿರ್ಮಾಣ ಸೇನೆ ಒತ್ತಾಯಿಸುತ್ತದೆ. ಒಂದು ವೇಳೆ ಸರಕಾರ ಅಸಡ್ಡೆ ನೀತಿ ತೋರಿದ್ದೇ ಆದರೆ ಕರ್ನಾಟಕ ನವನಿರ್ಮಾಣ ಸೇನೆ ಮುಂಬರುವ ದಿನಗಳಲ್ಲಿ ಸರಕಾರದ ವಿರುದ್ಧ ಬಾರಕೋಲ್ ಚಳುವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಶಾಂತ್ ಮಠಪತಿ, ಸಂತೋಷ್ ಪಾಟೀಲ್, ಸುನಿಲ್ ಶಿರಕೇ, ಶ್ರೀಶೈಲ್ ಕನ್ನಡ್ಗಿ, ಈಶ್ವರ. ಹೇರುರ, ವೆಂಕಟೇಶ್ ಗುತ್ತೇದಾರ್, ಈರಣ್ಣ ಪಾಟೀಲ್, ಭಾಗ್ಯವಂತ ಗುತ್ತೇದಾರ್, ಮಂಜು ಕಡಗಂಚಿ, ಅಭಿಷೇಕ್ ಲಾಡ ಚಿಂಚೋಳಿ ಸೇರಿದಂತೆ ಪ್ರತಿಭಟನೆಯಲ್ಲಿ ರೈತ ಮುಖಂಡರು ಇದ್ದರು.