ಕಲಬುರಗಿ | ಒಳಮೀಸಲಾತಿ ಸಮೀಕ್ಷೆಯಿಂದ ಯಾರೂ ಹೊರಗುಳಿಯಬೇಡಿ: ಎಚ್.ಆಂಜನೇಯ
ಕಲಬುರಗಿ: ರಾಜ್ಯ ಸರಕಾರ ನಡೆಸುತ್ತಿರುವ ಒಳಮೀಸಲಾತಿ ಸಮೀಕ್ಷೆಯಿಂದ ಯಾರೂ ಹೊರಗುಳಿಯಬೇಡಿ, ಎಲ್ಲರೂ ಸಮೀಕ್ಷೆಯಲ್ಲಿ ಭಾಗಿಯಾಗಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ಅವರು ಮನವಿ ಮಾಡಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್.ಆಂಜನೇಯ, ರಾಜ್ಯದಲ್ಲಿ 30 ವರ್ಷಗಳಿಂದ ಮೀಸಲಾತಿ ಸಿಗುತ್ತಿಲ್ಲ, ಸರಕಾರದ ಯೋಜನೆ ಗಳಿಂದ ವಂಚಿತರಾಗಿರುವ ಮಾದಿಗ ಸಮಾಜ, ಜಾತಿಗಳೊಂದಿಗೆ ಹೋರಾಟ ಮಾಡಿ ಸೌಲಭ್ಯ ಪಡೆಯುವ ಪರಿಸ್ಥಿತಿ ಉಂಟಾಗಿದೆ, ಹಾಗಾಗಿ ಮಾದಿಗ ಸಮುದಾಯದ ಯಾರೊಬ್ಬರು ಸಹ ಜಾತಿಗಣತಿಯಿಂದ ಹೊರಗುಳಿಯಬಾರದು. ಹುಟ್ಟಿದ ಮಗುವಿನ ಹೆಸರು ಸಮೀಕ್ಷೆಯಲ್ಲಿ ಸೇರಿಸಬೇಕು, ಎಲ್ಲರಿಗೂ ಸಮೀಕ್ಷೆ ಬಗ್ಗೆ ಜಾಗೃತಿ ಮೂಡಿಸಬೇಕು. ಎಲ್ಲ ಸಮುದಾಯಗಳು ತಮ್ಮ ಮೂಲ ಜಾತಿಯ ಹೆಸರನ್ನೇ ನಮೂದಿಸುವಂತೆ ಆಗ್ರಹಿಸಿದರು.
ಸುಪ್ರೀಂ ಕೋರ್ಟ್ ಒಳಮೀಸಲಾತಿ ನೀಡುವ ಅಧಿಕಾರ ರಾಜ್ಯ ಸರಕಾರಗಳಿಗೆ ಇದೆ ಎಂದು ಐತಿಹಾಸಿಕ ತೀರ್ಪು ನೀಡಿತ್ತು. ಇದನ್ನು ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಜಾರಿಗೆ ತರಲು ಬದ್ಧರಾಗಿದ್ದಾರೆ. ಅಲ್ಲದೆ, ಖಾಲಿಯಿರುವ ಹುದ್ದೆ, ಬ್ಯಾಕ್ ಲಾಗ್ ಹುದ್ದೆಗಳನ್ನು ಒಳಮೀಸಲಾತಿ ಸಮೀಕ್ಷೆಯ ವರದಿ ಬಳಿಕ ಭರ್ತಿ ಮಾಡುವ ಭರವಸೆ ಕೊಟ್ಟಿದ್ದಾರೆ ಎಂದು ಹೇಳಿದರು.
ಬೇಡ ಹಾಗೂ ಬುಡ್ಗ ಜಂಗಮ ಸಮುದಾಯದ ಬಗ್ಗೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿರುವುದು ಸ್ವಾಗತಾರ್ಹ, ವೀರಶೈವ ಜಂಗಮರೇ ಬೇರೆ, ಮಾಂಸ ಸೇವನೆ ಮಾಡುತ್ತಿದ್ದ ಬೇಡ ಜಂಗಮರೇ ಬೇರೆ. ಆಂಧ್ರದಿಂದ ಬಂದಿರುವ ಬೇಡ ಜಂಗಮರು ಬೇಟೆಯಾಡುತ್ತಿದ್ದರು. ಬೇಡ ಜಂಗಮರು ರಾಜ್ಯದಲ್ಲಿ ಯಾರೂ ಇಲ್ಲ. ಯಾವುದೇ ಕಾರಣಕ್ಕೂ ಮೂಲ ಸಮುದಾಯಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಬೇಡ ಜಂಗಮವನ್ನು ಪರಿಶಿಷ್ಟ ಜಾತಿಯಿಂದ ತೆಗೆದು ಹಾಕಬೇಕು. ರಾಜ್ಯ ಸರಕಾರ ಕೂಡಲೇ ಈ ಬಗ್ಗೆ ಕೇಂದ್ರಕ್ಕೆ ಶಿಪಾರಸ್ಸು ಮಾಡಬೇಕು. ಯಾರು ಜಂಗಮರು ಎಸ್‌ಸಿ ಪ್ರಮಾಣ ಪತ್ರ ಪಡೆದಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದರು.
ಮೈಸೂರು, ಬೆಂಗಳೂರು, ಚಾಮರಾಜನಗರ ಭಾಗದಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ ಎಂದು ಮಾದಿಗರು ಹಾಗೂ ಹೊಲೆಯರು ಬರೆಸಿದ್ದಾರೆ. ಇದನ್ನು ಬೇರ್ಪಡಿಸುವುದು ಕಷ್ಟವಾಗಿದೆ. ಆದರಿಂದಲೇ, ಮತ್ತೊಮ್ಮೆ ಜಾತಿಗಣತಿ ಮಾಡಲು ಸರಕಾರ ಮುಂದಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ಯಾಮ್ ನಾಟೀಕಾರ, ವಿಜಕುಮಾರ ಜಿ ರಾಮಕೃಷ್ಣ, ಲಿಂಗರಾಜ ತಾರಫೈಲ್, ನಾಗರಾಜ ಗುಂಡಗುರ್ತಿ, ಮಲ್ಲಿಕಾರ್ಜುನ ಜಿನಕೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.