×
Ad

ಕಲಬುರಗಿ | ಪಕ್ಷಿ ತಜ್ಞ ಡಾ.ಸಲೀಮ್ ಅಲಿ ಜನ್ಮದಿನಾಚರಣೆ ; ಪಕ್ಷಿಗಳ ವೀಕ್ಷಣಾ ಕಾರ್ಯಕ್ರಮ

Update: 2025-11-10 19:40 IST

ಕಲಬುರಗಿ: ಪಕ್ಷಿ ತಜ್ಞ ಡಾ.ಸಲೀಮ್ ಅಲಿ ಅವರ ಜನ್ಮದಿನೋತ್ಸವ ಪ್ರಯುಕ್ತ ನಗರದ ಶರಣಬಸವೇಶ್ವರ ವಿಜ್ಞಾನ ಮಹಾ ವಿದ್ಯಾಲಯದ ಪ್ರಾಣಿ ಶಾಸ್ತ್ರ ವಿಭಾಗ ಮತ್ತು ಎಕೋ ಕ್ಲಬ್ ಆಶ್ರಯದಲ್ಲಿ ಇಲ್ಲಿನ ಗುಲ್ಬರ್ಗ ವಿಶ್ವವಿದ್ಯಾಲಯದ ಕ್ಯಾಂಪಸ್ ಆವರಣದಲ್ಲಿ ಸೋಮವಾರ ಬೆಳಿಗ್ಗೆ "ಪಕ್ಷಿಗಳ ವೀಕ್ಷಣಾ ಕಾರ್ಯಕ್ರಮ" ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಾಂಶುಪಾಲರಾದ ಡಾ.ಬಿ. ರಾಮಕೃಷ್ಣ ರೆಡ್ಡಿ ಪಕ್ಷಿಗಳನ್ನು ವೀಕ್ಷಣೆ ಮಾಡಿ ಅವುಗಳ ಬಗೆಗಿನ ಕುತೂಹಲ ಸಂಗತಿಗಳನ್ನು ದಾಖಲಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡು ಪಕ್ಷಿಗಳ ಹೆಸರುಗಳನ್ನು ಮತ್ತು ಅವುಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡರು.

ಈ ವೇಳೆ ಮಾತನಾಡಿದ ಉಪನ್ಯಾಸಕ, ಪಕ್ಷಿ ವೀಕ್ಷಣಾ ತಂಡದ ಪವನ್ ಮೋಹನ್ ರಾವ್, ಕಾಲೇಜಿನ ಪ್ರಾಣಿ ಶಾಸ್ತ್ರ ವಿಭಾಗದ ವತಿಯಿಂದ ಪ್ರತಿವರ್ಷ ಈ ಕಾರ್ಯಕ್ರಮವನ್ನು ನಗರದ ವಿವಿಧ ಪರಿಸರ ವ್ಯವಸ್ಥೆಯಲ್ಲಿ ಆಯೋಜಿಸುತ್ತಾ ಬರುತ್ತಿದ್ದು, ವಿದ್ಯಾರ್ಥಿಗಳಲ್ಲಿ ಪಕ್ಷಿಗಳ ಬಗೆಗಿನ ಪ್ರಮುಖ ನಡುವಳಿಕೆ, ವಿಶೇಷ ವೈಶಿಷ್ಟ್ಯತೆಯನ್ನು ಪರಿಚಯಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು.

ಬೆಳಗ್ಗೆ 6 ಗಂಟೆಯಿಂದ 9ಗಂಟೆಯವರೆಗೆ ವೀಕ್ಷಣಾ ತಂಡ ಪಕ್ಷಿ ವೀಕ್ಷಣೆಯಲ್ಲಿ ತೊಡಗಿಕೊಂಡಿತ್ತು. ಈ ವೇಳೆಯಲ್ಲಿ ಪ್ರಮುಖವಾಗಿ 36 ವಿವಿಧ ಜಾತಿಯ ಪಕ್ಷಿಗಳನ್ನು ಗುರುತಿಸಲಾಯಿತು. ನವೆಂಬರ್ ವಲಸೆ ಹಕ್ಕಿಗಳ ಆರಂಭದ ದಿನಗಳಾಗಿದ್ದು, ಮುಂದಿನ ದಿನಗಳಲ್ಲಿ ವಲಸೆ ಹಕ್ಕಿಗಳು ಸಹ ನೋಡಬಹುದಾಗಿದೆ.

ಗುಲ್ಬರ್ಗ ವಿಶ್ವವಿದ್ಯಾಲಯ ಕ್ಯಾಂಪಸ್ ನಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಪ್ರಾಂಶುಪಾಲರು ಮತ್ತು ಪಕ್ಷಿ ವೀಕ್ಷಣೆ ತಂಡ ಭಾಗವಹಿಸಿತ್ತು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News