×
Ad

ಕಲಬುರಗಿ | ವೈದ್ಯಕೀಯ ಕ್ಷೇತ್ರ ಬಲಪಡಿಸುವುದೇ ನಮ್ಮ ಗುರಿ : ಶಶೀಲ್ ನಮೋಶಿ

Update: 2025-02-02 22:20 IST

ಕಲಬುರಗಿ : ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯವು ದೇಶದ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ಒಂದಾಗಿತ್ತು, ಈಗ ನನ್ನ ಅವಧಿಯಲ್ಲಿ ಮತ್ತೆ ಅದರ ಗತವೈಭವವನ್ನು ಮರಳಿ ಪ್ರಾರಂಭಿಸುವೆ ಎಂದು ಸಂಸ್ಥೆಯ ಅಧ್ಯಕ್ಷರೂ ಆಗಿರುವ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ.ನಮೋಶಿ ಹೇಳಿದರು.

ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ಸ್ಯಾಕ್ ಸಭಾಂಗಣದಲ್ಲಿ ನಡೆದ ಎಂ.ಆರ್.ಎಂ.ಸಿ ಕಾಲೇಜಿನ ಔಷಧಿ ವಿಭಾಗ, ಮೆಡಿಕಲ್ ಎಜುಕೇಶನ್ ಸರ್ವಿಸ್ ಆಂಡ್ ಅಕಾಡೆಮಿಕ್ ರಿಸರ್ಚ್ ಟ್ರಸ್ಟ್ ಹಾಗೂ ಅಸೋಷಿಯೇಷನ್ ಆಫ್ ಫಿಸಿಶಿಯನ್ಸ್ ಆಫ್ ಇಂಡಿಯಾ, ಕಲಬುರಗಿ ಯವರ ಸಹಭಾಗಿತ್ವದಲ್ಲಿ ಬಾಣಂತಿಯರು ಎದುರಿಸುವ ಸಂಧಿವಾತದ ಸಮಸ್ಯೆಯ ಅರಿವು ಮೂಡಿಸಲು ಅತ್ಯಾಧುನಿಕ ಸಂಧಿವಾತಶಾಸ್ತ್ರದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈಗಾಗಲೇ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 150 ಸ್ನಾತಕ ಪದವಿಗಳ ಪ್ರವೇಶಕ್ಕೆ ಅವಕಾಶವಿದ್ದು, ಈಗ ಈ ಆಡಳಿತ ಮಂಡಳಿಯ 250ಕ್ಕೆ ಹೆಚ್ಚಿಸಲು ನಿರ್ಧರಿಸಿ ಈಗಾಗಲೇ ಅನುಮೋದನೆ ತೆಗೆದುಕೊಳ್ಳುವ ಹಂತದಲ್ಲಿದ್ದೇವೆ, ಸ್ನಾತಕೋತ್ತರ ವೈದ್ಯಕೀಯ ಪದವಿ ಪ್ರವೇಶಾವಕಾಶವನ್ನು ಇನ್ನೂ 44 ಹೆಚ್ಚುವರಿಯಾಗಿ ಪಡೆಯಲು ನಿರ್ಧರಿಸಲಾಗಿದೆ ಎಂದರು.

ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯನ್ನು ತಮ್ಮೆಲ್ಲರ ಹಿರಿಯರ ಮಾರ್ಗದರ್ಶನ ಪಡೆದುಕೊಂಡು ಈಗಾಗಲೇ ಹಲವಾರು ಸುಧಾರಣೆ ಕ್ರಮಗಳನ್ನು ಕೈಗೊಳ್ಳಲಾಗಿದೆ, 160 ವೈದ್ಯಕೀಯ ವಿದ್ಯಾರ್ಥಿಗಳಿಗೆ ಅನೂಕೂಲವಾಗುವಂತೆ ಆಧುನಿಕ ರೀತಿಯ ವಿಧ್ಯಾರ್ಥಿ ನಿಲಯಕ್ಕೆ ನೀಲನಕ್ಷೆ ತಯಾರಾಗಿದ್ದು ಕೂಡಲೆ ಅಡಿಗಲ್ಲು ಹಾಕಲು ನಿರ್ಧರಿಸಲಾಗಿದೆ, ಸಂಗಮೇಶ್ವರ ಆಸ್ಪತ್ರೆಯನ್ನು ಸಂಪೂರ್ಣವಾಗಿ ನವೀನ್ ರೀತಿಯಲ್ಲಿ ಕಟ್ಟಡ ನಿರ್ಮಾಣ ಮಾಡಲಿದ್ದೇವೆ ಎಂದು ಹೇಳಿದರು.

ಸಂಸ್ಥೆಯ ಎಲ್ಲ ವೈದ್ಯಕೀಯ ವಿಭಾಗಗಳಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತ್ಯುತ್ತಮ ಸೇವೆ ಸಿಗುವಂತೆ ಮಾಡುವ ಗುರಿ ಹೊಂದಿದ್ದೇವೆ ಎಂದರು.

ಇನ್ನೋರ್ವ ಅತಿಥಿಗಳಾದ ಕರ್ನಾಟಕ ಸರಕಾರದ ಹಿಂದಿನ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಡಾ.ಎ.ಬಿ.ಮಲಕರೆಡ್ಡಿಯವರು ಮಾತನಾಡಿ, ಇಡೀ ವಿಶ್ವಕ್ಕೆ ಭಾರತೀಯರು ಅತ್ಯುತ್ತಮ ವೈದ್ಯರನ್ನು ನೀಡಿದ್ದಾರೆ, ಆದರೆ ಅವರ ಸೇವೆ ಭಾರತಕ್ಕೆ ಹೆಚ್ಚು ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಆರ್ ಜಿ ಯು ಎಚ್ ಎಸ್ ಬೆಂಗಳೂರು ಹಾಗೂ ಕೆಬಿಎನ್ ನ ಕಲಬುರಗಿಯ ಡಾ.ಪಿ.ಎಸ್.ಶಂಕರ್ ಮಾತನಾಡಿ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯು ದೇಶ ವಿದೇಶಕ್ಕೆ ಅನೇಕ ಶ್ರೇಷ್ಠ ವೈದ್ಯರನ್ನು ನೀಡಿದೆ ಎಂದು ಹೇಳಿದರು.

ವಿಶ್ವದ ಖ್ಯಾತ ಸಂಧಿವಾತದ ವೈದ್ಯರಾದ ಕ್ಯಾಲಿಕಟ್ ನ ಡಾ.ವಿನೋದ್ ರವಿಂದ್ರನ್, ಹೈದರಾಬಾದ್ ಯಶೋಧಾ ಆಸ್ಪತ್ರೆಯ ಸಂಧಿವಾತ ತಜ್ಞ ಡಾ.ಕೀರ್ತಿ ತಲಾರಿ ಬೊಮ್ಮನ ಕಾಂತಿ, ಕರ್ನಾಟಕದ ಸಿನಿಯರ್ ಫಿಜಿಷಿಯನ್ ಡಾ.ರಾಮ ಸ್ವರೂಪ್ ಜವಾಹರ, ನ್ಯಾಷನಲ್ ಎಪಿಐ ಅಧ್ಯಕ್ಷರು ಹೈದರಾಬಾದ್ ನ ಡಾ.ಜಿ.ನರಸಿಂಹಲು, ಕರ್ನಾಟಕ ರಾಜ್ಯದ ಅಧ್ಯಕ್ಷ ಡಾ.ಸುರೇಶ್ ಸಗರದ, ಡಾ.ಮಹಾಲಿಂಗಪ್ಪ ಬಿ., ಡಾ.ರವಿ ಕೀರ್ತಿ, ಬಸವೇಶ್ವರ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಆನಂದ ಗಾರಂಪಳ್ಳಿ, ಕಾರ್ಯಕ್ರಮದ ಆಯೋಜಕರಾದ ಡಾ.ನಾಗರಾಜ್ ಕೋತ್ಲೀ, ಡಾ.ಸುರೇಶ್ ಹರಸೂರ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಡಾ.ಸಂಗ್ರಾಮ ಬಿರಾದಾರ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಡಾ.ಶಿವರಾಜ್ ಅಲಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಮುರುಗೇಶ್ ಪಸ್ತಾಪೂರ ಕಾರ್ಯಕ್ರಮ ನಿರೂಪಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News