Kalaburagi | ಕಾವ್ಯದ ವಿವಿಧ ಪರಿಕರಗಳ ಅಧ್ಯಯನವೇ ಕಾವ್ಯ ಮೀಮಾಂಸೆ: ಡಾ.ಚಿದಾನಂದ ಚಿಕ್ಕಮಠ
ಕಲಬುರಗಿ: ಕಾವ್ಯದ ಪರಿಕರಗಳಾದ ರಸ, ಧ್ವನಿ, ಶೈಲಿ, ವಕ್ರೋಕ್ತಿ, ಅಲಂಕಾರ, ವ್ಯಂಗ್ಯಾರ್ಥ, ಲಕ್ಷಣಾರ್ಥ, ವಾಚ್ಯಾರ್ಥ ಹಾಗೂ ಕಾವ್ಯದ ಉಗಮ, ವಿಕಾಸ, ಲಾಕ್ಷಣಿಕರ ಪರಿಚಯ ಮತ್ತು ಅವರ ಸಿದ್ಧಾಂತಗಳನ್ನು ಅಧ್ಯಯನ ಮಾಡುವುದೇ ಕಾವ್ಯ ಮೀಮಾಂಸೆಯಾಗಿದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಚಿದಾನಂದ ಚಿಕ್ಕಮಠ ಹೇಳಿದರು.
ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಬುಧವಾರ ಭಾರತೀಯ ಕಾವ್ಯ ಮೀಮಾಂಸೆ ಕುರಿತು ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಕಾವ್ಯ ಮೀಮಾಂಸೆಯನ್ನು ಹಿಂದೆ ಕ್ರಿಯಾಕಲ್ಪ, ಅಲಂಕಾರಶಾಸ್ತ್ರ ಹಾಗೂ ಲಕ್ಷಣಗ್ರಂಥ ಎಂದು ಕರೆಯಲಾಗುತ್ತಿತ್ತು. ಕಾವ್ಯದಲ್ಲಿನ ರಸಗಳು, ಸ್ಥಾಯಿಭಾವಗಳು, ಸಂಚಾರಿ ಭಾವಗಳು, ಕಾವ್ಯದ ಧ್ವನಿ, ವಾಕ್ಯ, ಪದ, ಶಬ್ದ, ಶೈಲಿ ಹಾಗೂ ಅಲಂಕಾರಗಳ ಕುರಿತು ಶಾಸ್ತ್ರೀಯವಾಗಿ ಅಧ್ಯಯನ ಮಾಡುವುದೇ ಕಾವ್ಯ ಮೀಮಾಂಸೆಯಾಗಿದೆ. ವಿದ್ಯಾರ್ಥಿನಿಯರು ಈ ವಿಷಯದ ಕುರಿತು ಆಳವಾಗಿ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಸೀಮಾ ಪಾಟೀಲ ಮಾತನಾಡಿ, ಕಾವ್ಯವು ಒಂದು ಶಾಸ್ತ್ರೀಯ ವಿಷಯವಾಗಿದ್ದು, ವಿದ್ಯಾರ್ಥಿಗಳು ನಿರಂತರವಾಗಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಪುಟ್ಟಮಣಿ ದೇವಿದಾಸ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಪೂರ್ಣಿಮಾ ಮಾಸಿಮಾಡೆ ಸ್ವಾಗತಿಸಿದರು. ಡಾ.ಶಾಂತಲಿಂಗ ಘಂಟೆ ನಿರೂಪಿಸಿ, ವಂದಿಸಿದರು. ಶಿಕ್ಷಕರು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.