ಶಹಾಪುರ | ಮರಳು ಸಾಗಣೆ ನಿಯಮ ಸರಳೀಕರಣಕ್ಕೆ ಆಗ್ರಹಿಸಿ ಕಾರ್ಮಿಕರ ಧರಣಿ
ಶಹಾಪುರ: ಮರಳು ಸಾಗಣೆಗೆ ವಿಧಿಸಿರುವ ಕಟ್ಟುನಿಟ್ಟಿನ ನಿಯಮಗಳಿಂದ ಕಟ್ಟಡ ನಿರ್ಮಾಣ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಕಾರ್ಮಿಕರು ಉದ್ಯೋಗವಿಲ್ಲದೆ ಸಂಕಷ್ಟ ಎದುರಿಸುವಂತಾಗಿದೆ. ಕೂಡಲೇ ಮರಳು ಸಾಗಣೆಯ ನಿಯಮಗಳನ್ನು ಸರಳೀಕರಿಸಿ, ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿ ಕಟ್ಟಡ ಕಟ್ಟುವ ಮತ್ತು ಕಲ್ಲು ಕ್ವಾರಿ ಕಾರ್ಮಿಕರ ಸಂಘಟನೆಯ ವತಿಯಿಂದ ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಲಾಯಿತು.
ನಗರದ ವಾಲ್ಮೀಕಿ ವೃತ್ತದಿಂದ ಹೊಸ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಮಿಕರು, ಬಳಿಕ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮರಳಿನ ಅಭಾವದಿಂದ ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ. ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಕಾರ್ಮಿಕರು ಕೆಲಸವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಕೂಡಲೇ ಈ ಸಮಸ್ಯೆಯನ್ನು ಪರಿಹರಿಸಿ, ಮರಳು ಸಾಗಣೆಗೆ ಸರಳ ನಿಯಮಗಳನ್ನು ಜಾರಿಗೊಳಿಸುವ ಮೂಲಕ ಕಾರ್ಮಿಕರ ಬದುಕಿಗೆ ಆಸರೆಯಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ಭೀಮರಾಯ ಕದರಾಪುರ, ಪ್ರಧಾನ ಕಾರ್ಯದರ್ಶಿ ಚಾದಪಾಷಾ ಮಂಕಲದೊಡ್ಡಿ, ಜಿಲ್ಲಾ ಗೌರವಾಧ್ಯಕ್ಷ ಚಂದ್ರಪ್ಪ ಕಟ್ಟಿಮನಿ, ತಿಮ್ಮಯ್ಯ ತಳವಾರ, ರಾಮು ರಾಟೋಡ್, ನಿಂಗಪ್ಪ ವಂದಾಲ್, ಭೀಮರಾಯ ಹೊಸಮನಿ, ಅಮಲಯ್ಯ ಅರಳಹಳ್ಳಿ, ಹುಸೇನಪಟೇಲ್, ಮಲ್ಲಿಕಾರ್ಜುನ ದಂಡಾಗೋಳ, ನಿಂಗಪ್ಪ ಗುಡಿಮನಿ, ನಾರಾಯಣ ನಬಿಸಾಬ್ ಸೇರಿದಂತೆ ಅನೇಕ ಕಾರ್ಮಿಕರು ಪಾಲ್ಗೊಂಡಿದ್ದರು.