ಕಮಲಾಪುರ | ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಧರಣಿ ಸತ್ಯಾಗ್ರಹ
ಕಮಲಾಪುರ: ಕಮಲಾಪುರ ತಾಲೂಕು ಭೀಕರ ಬರಗಾಲಕ್ಕೆ ತುತ್ತಾಗಿದ್ದು, ರೈತರು, ಕೃಷಿ ಕಾರ್ಮಿಕರು ಹಾಗೂ ಬಡತನ ರೇಖೆಗಿಂತ ಕೆಳಗಿರುವ ತಳಸಮುದಾಯದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಕೂಡಲೇ ಜನರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಅಮೃತ ಗೌರೆ ಆಗ್ರಹಿಸಿದರು.
ಕಮಲಾಪುರ ತಾಲೂಕಿನ ರೈತರು ಶೇ.90ರಷ್ಟು ಮಳೆ ಕೊರತೆ ಎದುರಿಸಿದ್ದು, ಮುಂಗಾರು ಬೆಳೆ ಸಂಪೂರ್ಣ ನಾಶವಾಗಿದೆ. ಮಳೆಯ ಅಭಾವದಿಂದ ಹಿಂಗಾರು ಬಿತ್ತನೆ ಕಾರ್ಯವೂ ನಡೆಯದ ಪರಿಸ್ಥಿತಿ ನಿರ್ಮಾಣವಾಗಿದ್ದು, ಹಿಂಗಾರು ಬೆಳೆ ಕೂಡ ಕೈಗೆಟುಕದಂತಾಗಿದೆ. ಹೀಗಾಗಿ ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ಸಹಕಾರ ಸಂಘಗಳಲ್ಲಿ ಪಡೆದಿರುವ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ವಯೋವೃದ್ಧರ ಪಿಂಚಣಿ ಹಾಗೂ ವಿಧವಾ ವೇತನ ಸ್ಥಗಿತಗೊಂಡಿರುವುದರಿಂದ ಅರ್ಹ ಫಲಾನುಭವಿಗಳಿಗೆ ಕೂಡಲೇ ಅವುಗಳನ್ನು ಪುನರಾರಂಭಿಸಬೇಕು ಎಂದು ಆಗ್ರಹಿಸಿದರು.
ಅಲ್ಲದೆ, ಕಮಲಾಪುರ ತಾಲೂಕಿನ ಬತ್ತಿಹೋಗಿರುವ ಸಣ್ಣ ಮತ್ತು ಅತಿ ಸಣ್ಣ ಕೆರೆಗಳಿಗೆ ಬೇಣ್ಣೆತೊರೆ ಕುರಿಕೋಟಾ ಬ್ರಿಡ್ಜ್‌ನಿಂದ ಹಾಗೂ ಕಿಣ್ಣಿ ಸಡಕನ ಮುಲ್ಲಾಮಾರಿ ನದಿಯಿಂದ ನೀರು ತುಂಬಿಸುವ ಕಾಮಗಾರಿಯನ್ನು ಕೂಡಲೇ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಮಲಾಪುರ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಿದ್ದಣಗೌಡ ಗೊಳೆದ, ಬಸವರಾಜ ಕಲಕೇರಿ, ಅಮೃತರಾವ್ ಸೌಕಾರ, ಶರಣಪ್ಪ ಎಲಪಳ್ಳಿ, ಪ್ರಭಾಕರ, ಸಿದ್ದಣಗೌಡ ಬಿರಾದಾರ, ಅಲೋಕ್ ಕುಮಾರ್ ಗೌರೆ, ಜಯಾ ಪಟ್ನಾಯಕ, ಅಶು ಗೌರೆ, ಅಮಿತ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.