Kalburagi | ಅಫ್ಝಲ್ ಪುರದಲ್ಲಿ ಆರು ರೌಡಿ ಶೀಟರ್ ಗಳ ಮನೆಗಳ ಮೇಲೆ ಪೊಲೀಸ್ ದಾಳಿ
ಅಫ್ಝಲ್ ಪುರ: ಪಟ್ಟಣದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಅಫ್ಝಲ್ ಪುರ ವೃತ್ತದ ರೌಡಿ ನಿಗ್ರಹ ದಳ ಹಾಗೂ ಅಫ್ಝಲ್ ಪುರ ಪೊಲೀಸ್ ಠಾಣೆಯ ಸಂಯುಕ್ತ ಆಶ್ರಯದಲ್ಲಿ ಆರು ರೌಡಿ ಶೀಟರ್ಗಳ ಮನೆಗಳ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಲಾಗಿದೆ.
ಅಫ್ಝಲ್ ಪುರ ವೃತ್ತದ ಸಿಪಿಐ ಲಖನ್ ಮುಸಗುಪ್ಪಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ರೌಡಿ ಶೀಟರ್ಗಳ ಮನೆಗಳಿಗೆ ದಿಢೀರ್ ಭೇಟಿ ನೀಡಿ, ಅಂಗಶೋಧನೆ ಹಾಗೂ ಮನೆಗಳ ಸಂಪೂರ್ಣ ಪರಿಶೀಲನೆ ನಡೆಸಲಾಯಿತು.
ತಪಾಸಣೆ ವೇಳೆ ರೌಡಿ ಶೀಟರ್ಗಳಿಗೆ ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ತೊಡಗಬಾರದು, ಸಾರ್ವಜನಿಕರಿಗೆ ಬೆದರಿಕೆ ಹಾಕಬಾರದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಅಥವಾ ಭಯ ಹುಟ್ಟಿಸುವ ವಿಡಿಯೊಗಳನ್ನು ಹಂಚಿಕೊಳ್ಳಬಾರದು ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಯಾವುದೇ ಕೃತ್ಯಗಳಲ್ಲಿ ಭಾಗಿಯಾಗದಂತೆ ಪೊಲೀಸರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಕಾರ್ಯಾಚರಣೆಯಲ್ಲಿ ಎಎಸ್ಸೈ ಬಸವರಾಜ ಆಲೂರ, ಹೆಡ್ ಕಾನ್ಸ್ಟೇಬಲ್ಗಳಾದ ಕಾಶಿನಾಥ್, ಸಂತೋಷ್, ಪೊಲೀಸ್ ಸಿಬ್ಬಂದಿಗಳಾದ ಆನಂದ, ಇಮಾಮ್ ಭಾಗವಾನ್, ರೇವೂರ ಠಾಣೆಯ ಶಿವಶರಣ, ಭಾಗಣ್ಣ, ಠಾಣೆಯ ಶಿವಯ್ಯ ಹಾಗೂ ಮಕ್ತುಂ ಪಟೇಲ್ ಭಾಗವಹಿಸಿದ್ದರು.
ಇಂತಹ ದಿಢೀರ್ ಕಾರ್ಯಾಚರಣೆಗಳು ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ನಡೆಯಲಿದ್ದು, ಸಮಾಜದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.