×
Ad

ಕಲಬುರಗಿ | ಕಲ್ಯಾಣ ಕರ್ನಾಟಕಕ್ಕೆ ಮಲತಾಯಿ ಧೋರಣೆ : ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ

Update: 2025-01-17 21:44 IST

ಕಲಬುರಗಿ : ಕಲ್ಯಾಣ ಕರ್ನಾಟಕ ಮತ್ತು ಕಲಬುರಗಿಗೆ ಮಲತಾಯಿ ಧೋರಣೆ ತೋರುವ ಮೂಲಕ ಅನ್ಯಾಯ ಮಾಡುತ್ತಿರುವ ಕೇಂದ್ರ ಸರಕಾರದ ವಿರುದ್ಧ ಕಲ್ಯಾಣ ನಾಡು ವಿಕಾಸ ವೇದಿಕೆಯ ವತಿಯಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.

ಸತತ 11 ವರ್ಷಗಳಲ್ಲಿ ಕಲಬುರಗಿ ಜಿಲ್ಲೆಗೆ ಯಾವುದೇ ಹೊಸ ಯೋಜನೆ ಘೋಷಣೆ ಮಾಡದಿರುವ ಮತ್ತು ಘೋಷಣೆಯಾಗಿರುವ ಯೋಜನೆಗಳನ್ನು ಜಾರಿಗೆ ತರದೇ ಅನ್ಯಾಯ ಮಾಡುತ್ತಿರುವ ಕೇಂದ್ರ ಸರಕಾರದ ವಿರುದ್ದ ಕಲ್ಯಾಣ ನಾಡು ವಿಕಾಸ ವೇದಿಕೆಯ ಪದಾಧಿಕಾರಿಗಳು ಪ್ರತಿಭಟನೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

1984ರಲ್ಲಿ ಸರಿನ್ ಸಮಿತಿ ಶಿಫಾರಸ್ಸು ಮತ್ತು 2014ರಲ್ಲಿ ಶಂಕು ಸ್ಥಾಪನೆಯಾದ ಕಲಬುರಗಿ ರೈಲ್ವೇ ವಿಭಾಗವು ರಾಜಕೀಯ ವೈರತ್ವದಿಂದ ಇದುವರೆಗೂ ಜಾರಿಯಾಗಿರುವುದಿಲ್ಲ. ಕಲಬುರಗಿ ಜಿಲ್ಲೆಯು ಮುಂಬೈ, ಸಿಕಿಂದ್ರಾಬಾದ, ವೈಜಾಗ, ಹುಬ್ಬಳ್ಳಿ, 4 ರೈಲ್ವೇ ವಲಯಗಳಲ್ಲಿ ಹಾಗೂ ಸೋಲಾಪೂರ, ಸಿಕಿಂದ್ರಾಬಾದ ಮತ್ತು ಗುಂಟಕಲ ವಿಭಾಗಗಳಲ್ಲಿ ಹರಿದು ಹಂಚಿ ಹೋಗಿದೆ. 4 ವಲಯ 3 ವಿಭಾಗಗಳಲ್ಲಿ ಹಂಚಿ ಹೋಗಿರುವುದರಿಂದ ನಮ್ಮ ಬೇಡಿಕೆಗಳಿಗೆ ಅನುಮೋದನೆ ಸಿಗದೆ ಜನರಿಗೆ ತುಂಬಾ ಕಷ್ಟವಾಗುತ್ತಿದೆ. ಇದೀಗ ಕೇಂದ್ರ ಸರಕಾರವು ವೈಜಾಗ್ ವಲಯ ರಚನೆ ಮಾಡಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳನ್ನು ಅದಕ್ಕೆ ಸೇರಿಸಿ, ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ ಮತ್ತು ಕಲಬುರಗಿ ರೇಲ್ವೆ ವಿಭಾಗ ಆಗದೇ ಇರಲು ಮಾಡುತ್ತಿರುವ ಕೇಂದ್ರ ಸರಕಾರದ ಹುನ್ನಾರವಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ.

2014ರಲ್ಲಿ ಘೋಷಣೆಯಾಗಿದ್ದ ಕಲಬುರಗಿ ಮತ್ತು ಜಮ್ಮು ರೈಲ್ವೇ ವಿಭಾಗ ಬೇಡಿಕೆಗಳಲ್ಲಿ ಕೇಂದ್ರ ಸರಕಾರ ಕೇವಲ ಜಮ್ಮು ವಿಭಾಗ ಆರಂಭಿಸಿರುವುದು ಕಲಬುರಗಿಯ ಬಗ್ಗೆ ಇರುವ ಮಲತಾಯಿ ಧೋರಣೆ ಎದ್ದು ಕಾಣುತ್ತದೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ಮುತ್ತಣ್ಣ ಎಸ್.ನಡಗೇರಿ, ಜಿಲ್ಲಾಧ್ಯಕ್ಷ ಬಾಬು ಮದನಕರ, ಸಂಘಟಕರಾದ ಜೈಭೀಮ ಮಾಳಗೆ, ಮೋಹನ ಸಾಗರ, ದತ್ತು ಜಮಾದಾರ, ಭಾಗೇಶ ಗುತ್ತೆದಾರ, ಪ್ರವೀಣ ಖೇಮನ, ದೇವು ದೊರೆ, ಪ್ರಶಾಂತ ಗಾಯಕವಾಡ, ಮಲ್ಲು ಸಂಕನ, ಆಕಾಶ ಬಾಗೋಡಿ, ರಾಕೇಶ ದೊಡಮನಿ, ಶಿವು ಕೋಟೆ, ಜೀವನ ಸೇರಿದಂತೆ ಇತರರು ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News