ಕಲಬುರಗಿ| ಸಂವಿಧಾನ, ಮದರಸಾಗಳ ಸಂರಕ್ಷಣೆ ಕುರಿತು ಜನಜಾಗೃತಿ ಕಾರ್ಯಕ್ರಮ
ಕಲಬುರಗಿ: ಇಲ್ಲಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜಮಿಯತ್ ಉಲಮಾ-ಇ-ಹಿಂದ್ ಸಂಘಟನೆ ವತಿಯಿಂದ ರವಿವಾರ 'ನಮ್ಮ ಸಂವಿಧಾನ ಹಾಗೂ ಮದರಸಾಗಳ ಸಂರಕ್ಷಣೆ' ಕುರಿತ ಬೃಹತ್ ಜನಜಾಗೃತಿ ಕಾರ್ಯಕ್ರಮ ನಡೆಯಿತು.
ಜಮಿಯತ್ ಉಲಮಾ ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷ ಮೌಲಾನಾ ಅಸ್ಜದ್ ಮದನಿ ಮಾತನಾಡಿ, ಸಂವಿಧಾನ ನಮಗೆ ಧಾರ್ಮಿಕ ಸ್ವಾತಂತ್ರ್ಯ ಸೇರಿದಂತೆ ಅನೇಕ ಹಕ್ಕುಗಳನ್ನು ನೀಡಿದೆ. ದೇಶಕ್ಕೆ ಉನ್ನತ ಸಂವಿಧಾನ ಇರುವುದರಿಂದಲೇ ಮೂವರು ಮುಸ್ಲಿಮರು ರಾಷ್ಟ್ರಪತಿಗಳಾಗಿದ್ದಾರೆ. ಒಂದು ವೇಳೆ ಸಂವಿಧಾನ ಇಲ್ಲದಿದ್ದರೆ ಧಾರ್ಮಿಕ ಸ್ವಾತಂತ್ರ್ಯವಾಗಲಿ, ಮದರಸಾಗಳ ರಕ್ಷಣೆ ಮಾಡುವುದಾಗಲಿ ಸಾಧ್ಯವಿರಲಿಲ್ಲ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಮಿಯತ್ ಉಲಮಾ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಾಸೂಮ್ ಸಾಕಿಬ್ ಸಾಹೇಬ್ ಮಾತನಾಡಿ, ನಾವು ಜಾತ್ಯತೀತ ರಾಷ್ಟ್ರದಲ್ಲಿದ್ದೇವೆ, ದೇಶದಲ್ಲಿ ಎಲ್ಲರೂ ಸಮಾನರು, ಎಲ್ಲರಿಗೂ ತಮ್ಮ ತಮ್ಮ ಧರ್ಮಗಳನ್ನು ಅನುಸರಿಸುವ ಹಕ್ಕಿದೆ. ಹಲವು ಹಕ್ಕುಗಳಿದ್ದರೂ ಅವುಗಳನ್ನು ಪಡೆಯಲು ಕಾನೂನು ಬದ್ಧ ಹೋರಾಟವೂ ಅಗತ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಮಿಯತ್ ಉಲಮಾ-ಇ-ಹಿಂದ್ ಸಂಘಟನೆ ಸದಸ್ಯ ಮೌಲಾನಾ ಅಬ್ದುಲ್ ರಝಾಕ್ ಖಾಸ್ಮಿ, ಮೌಲಾನಾ ಏಜಾಜ್ ಅಹ್ಮದ್ ಖಾಸ್ಮಿ, ಸೈಯದ್ ಶಹಬಾಜ್ ಹುಸೇನ್ ಇನಾಮದಾರ, ಮಹಮ್ಮದ್ ಸಿರಾಜುದ್ದೀನ್ ಜಿಯಾಯಿ, ಮೇರಾಜ್ ಸೇರಿದಂತೆ ಹಲವರು ಮುಖಂಡರು ಹಾಜರಿದ್ದರು.