×
Ad

ಕಲಬುರಗಿ | ರಾಜ್ಯ ಸರಕಾರದ ಪ್ರೋತ್ಸಾಹಧನದೊಂದಿಗೆ ಬೆಂಬಲ ಬೆಲೆಗೆ ತೊಗರಿ ಖರೀದಿ

Update: 2025-02-13 21:13 IST

ಕಲಬುರಗಿ : ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ 2024-25ನೇ ಸಾಲಿನ ಮುಂಗಾರು ಹಂಗಾಮಿನ ಎಫ್.ಎ.ಕ್ಯೂ. ಗುಣಮಟ್ಟದ ತೊಗರಿ ರೈತರಿಂದ ಖರೀದಿಸಲು ಜಿಲ್ಲೆಯಲ್ಲಿ ಈಗಾಗಲೇ ನೋಂದಣಿ ಮತ್ತು ಮಾರಾಟ ಪ್ರಕ್ರಿಯೆ ನಡೆದಿದ್ದು, ನೊಂದಣಿಗೆ ಮಾ.18 ಕೊನೆ ದಿನವಾಗಿರುವುದರಿಂದ ಇದೂವರೆಗೆ ನೊಂದಣಿ ಮಾಡದ ರೈತರು ಕೂಡಲೇ ನೋಂದಣಿ ಮಾಡಿಸಿ ಯೋಜನೆಯ ಲಾಭ ಪಡೆಯಬೇಕೆಂದು ಡಿಸಿ ಬಿ.ಫೌಜಿಯಾ ತರನ್ನುಮ ರೈತ ಸಮುದಾಯದಲ್ಲಿ ಮನವಿ ಮಾಡಿದ್ದಾರೆ.

ಎಫ್.ಎ.ಕ್ಯೂ ಗುಣಮಟ್ಟದ ಪ್ರತಿ ಕ್ವಿಂಟಾಲ್ ತೊಗರಿಗೆ ಕೇಂದ್ರ ಸರಕಾರ ಪ್ರತಿ ಕ್ವಿಂಟಾಲ್ಗೆ 7,550 ರೂ. ದರ ನಿಗದಿ ಮಾಡಿದ್ದು ಇದಕ್ಕೆ ಕರ್ನಾಟಕ ರಾಜ್ಯ ಸರ್ಕಾರವು ಪ್ರತಿ ಕ್ವಿಂಟಾಲ್ಗೆ 450 ರೂ. ಪ್ರೋತ್ಸಾಹ ಧನ ನೀಡುವಾದಿ ಘೋಷಿಸಿದೆ. ಹೀಗಾಗಿ ಪ್ರತಿ ಕ್ವಿಂಟಾಲ್ಗೆ 8,000 ರೂ. ಗಳಂತೆ ಪ್ರತಿ ಎಕರೆಗೆ 4 ಕ್ವಿಂಟಾಲ್ನಂತೆ ಪ್ರತಿ ರೈತರಿಂದ ಗರಿಷ್ಠ 40 ಕ್ವಿಂಟಾಲ್ ಖರೀದಿಸಲಾಗುತ್ತದೆ. ಹಣವನ್ನು ಡಿ.ಬಿ.ಟಿ ಮೂಲಕ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು ಎಂದು ಡಿಸಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

ಇನ್ನು ತೊಗರಿ ಖರೀದಿಗೆ ಕೇಂದ್ರ ಸರ್ಕಾರವು ನಾಫೆಡ್ ಮತ್ತು ಎನ್.ಸಿ.ಸಿ.ಎಫ್ ಸಂಸ್ಥೆಗಳನ್ನು ಖರೀದಿ ಸಂಸ್ಥೆಗಳನ್ನಾಗಿ ಮಾಡಿದ್ದು, ರಾಜ್ಯದಿಂದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿಯಮಿತ ಮತ್ತು ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯನ್ನು ನೋಡಲ್ ಏಜೆನ್ಸಿಗಳನ್ನಾಗಿ ನೇಮಿಸಿದೆ. ಅದರಂತೆ ಕಲಬುರಗಿ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ರೈತ ಉತ್ಪಾದಕರ ಸಂಘಗಳು ಹಾಗೂ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘಗಳನ್ನು ಗುರುತಿಸಿ 194 ತೊಗರಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.

ಕರ್ನಾಟಕ ರಾಜ್ಯ ದ್ವೀದಳ ಧಾನ್ಯ ಅಭಿವೃದ್ದಿ ಮಂಡಳಿ ಸಂಸ್ಥೆಗೆ 65 ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿಗೆ ಸಂಸ್ಥೆಗೆ 129 ಖರೀದಿ ಕೇಂದ್ರಗಳನ್ನು ಹಂಚಿಕೆ ಮಾಡಲಾಗಿದ್ದು, ಇವರಿಂದ ಕ್ರಮವಾಗಿ 2,669 ಮತ್ತು 5,764 ಸೇರಿ ಇದೂವರೆಗೆ ಜಿಲ್ಲೆಯಲ್ಲಿ 8,433 ರೈತರು ತೊಗರಿ ಮಾರಾಟಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಡಿಸಿ ತಿಳಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News