ಕಲಬುರಗಿ | ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸಲು ಮತ್ತೆ ಕೇಂದ್ರಕ್ಕೆ ಶಿಫಾರಸ್ಸು: ಸಿದ್ದರಾಮಯ್ಯ
ಕಲಬುರಗಿ ಸಿಟಿ ಬಸ್ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣರ ಹೆಸರು ನಾಮಕರಣ
ಕಲಬುರಗಿ: ಸೆ.22ರಿಂದ ಅ.7ರವರೆಗೆ ನಡೆಯುವ ಜಾತಿ ಸಮೀಕ್ಷೆಯಲ್ಲಿ, “ಕುರುಬ” ಅಂತಲೇ ಜಾತಿ ಹೆಸರನ್ನು ಬರೆಸಿದರೆ ಮಾತ್ರ ಸಮುದಾಯದ ನಿಖರ ಸ್ಥಿತಿ ಹಾಗೂ ಸಾಮಾಜಿಕ ಅನುಕೂಲಗಳು ದೊರೆಯಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.
ಕರ್ನಾಟಕ ರಾಜ್ಯ ಕುರುಬಗೊಂಡ ಸಂಘ ಹಾಗೂ ಸಂಗೊಳ್ಳಿ ರಾಯಣ್ಣ ಯುವಕ ಸಂಘದ ವತಿಯಿಂದ ಕಲಬುರಗಿಯಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ರಾಯಣ್ಣ ಮೂರ್ತಿ ಅನಾವರಣ ಹಾಗೂ ಕಲಬುರಗಿ ಸಿಟಿ ಬಸ್ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣರ ಹೆಸರು ನಾಮಕರಣ ನೆರವೇರಿಸಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕುರುಬ ಸಮುದಾಯವನ್ನು ಎಸ್.ಟಿ. ವರ್ಗಕ್ಕೆ ಸೇರಿಸಲು ಹಿಂದೆ ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ ಅದನ್ನು ಹಿಂತಿರುಗಿಸಿದ್ದು, ಇದೀಗ ಹೆಚ್ಚುವರಿ ಅಂಕಿಅಂಶಗಳು ಮತ್ತು ದಾಖಲೆಗಳೊಂದಿಗೆ ಮತ್ತೆ ಶಿಫಾರಸ್ಸು ಕಳುಹಿಸಲಾಗುವುದು ಎಂದು ಭರವಸೆ ನೀಡಿದರು.
ಕುರುಬ ಸಮುದಾಯ ಶೇ.7ರಷ್ಟಿದ್ದರೂ, ಶಿಕ್ಷಣದಲ್ಲಿ ಹಿಂದುಳಿದಿದೆ. ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕು. ಸಮುದಾಯದ ಶೈಕ್ಷಣಿಕ ಪ್ರಗತಿಗೆ ಸರ್ಕಾರ ಬದ್ಧವಾಗಿದೆ ಎಂದರು.
ಜಾತಿ ವ್ಯವಸ್ಥೆಯೇ ಅಸಮಾನತೆಗೆ ಕಾರಣ. ಬುದ್ಧ, ಬಸವ, ಅಂಬೇಡ್ಕರ್ ಅವರ ಆಶಯದಂತೆ ಜಾತಿರಹಿತ, ವರ್ಗರಹಿತ ಸಮಾಜ ನಿರ್ಮಾಣವಾಗಬೇಕು. ನಮ್ಮ ಸರ್ಕಾರ ಅದಕ್ಕಾಗಿ ಹಲವು ಭಾಗ್ಯಗಳು ಮತ್ತು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.
ಹಿಂದುಳಿದವರ ಸಾಮಾಜಿಕ, ಶೈಕ್ಷಣಿಕ ಸ್ಥಿತಿ ಅರಿಯಲು ತಮ್ಮ ಮೊದಲ ಅವಧಿಯಲ್ಲಿ ಸಮೀಕ್ಷೆ ನಡೆಸಿದ್ದೇನೆ ಎಂದು ನೆನಪಿಸಿದರು.
ರಾಜ್ಯ ಸುತ್ತಿ ಮಠ ಮಾಡಿದ್ದು ನಾವು :
“ಇಡೀ ರಾಜ್ಯ ಸುತ್ತಿ ಮಠ ಮಾಡಿದ್ದು ನಾವು. ಆದರೆ ಈಗ ಕೆಲವು ಡೋಂಗಿಗಳು ನಾವೇ ಮಠ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಅವರ ಮಾತು ನಂಬಬೇಡಿ. ನಾನು ಅಧಿಕಾರದಲ್ಲಿ ಇರಲಿ, ಬಿಡಲಿ, ಸಾಮಾಜಿಕ ನ್ಯಾಯಕ್ಕಾಗಿ ಕೆಲಸ ಮಾಡ್ತೀನಿ. ನಾವೆಲ್ಲರೂ ಕನಕದಾಸರು ಮತ್ತು ಸಂಗೊಳ್ಳಿ ರಾಯಣ್ಣ ಅವರ ದಾರಿಯಲ್ಲೇ ನಡೆಯೋಣ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.