×
Ad

ಕಲಬುರಗಿ | ಹಳೆಯ ವೈಷಮ್ಯದಿಂದ ರೌಡಿಶೀಟರ್ ಮೇಲೆ ಹಲ್ಲೆ : ಪ್ರಕರಣ ದಾಖಲು

Update: 2025-09-12 15:54 IST

ಕಲಬುರಗಿ: ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಐದಾರು ಜನರ ಗುಂಪೊಂದು ರೌಡಿಶೀಟರ್ ಓರ್ವನನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ಶಹಾಬಾದ್ ಹೊರವಲಯದ ಭಂಕೂರ ಸಮೀಪ ಗುರುವಾರ ಸಂಜೆ ನಡೆದಿದೆ.

ರೌಡಿಶೀಟರ್ ಆಗಿರುವ ಶಂಕರ ಅಳ್ಕೊಳ್ಳಿ ಮೇಲೆ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ ಎಂದು ತಿಳಿದುಬಂದಿದೆ.

ಐನಾಪುರ ಧಾಬಾದಲ್ಲಿ ಸಂಬಂಧಿಕರು, ಗೆಳೆಯರೊಂದಿಗೆ ಊಟ ಮಾಡುತ್ತಿರುವ ಸಂದರ್ಭದಲ್ಲಿ ಬಿಳಿ ಬಣ್ಣದ ಬೊಲೇರೊದಲ್ಲಿ ಬಂದ ಯುವಕರ ಗುಂಪು ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾರೆ, ಹಲ್ಲೆಯಿಂದ ಸಣ್ಣಪುಟ್ಟ ಗಾಯವಾಗಿವೆ ಎಂದು ಹೇಳಲಾಗಿದೆ. ಈ ವೇಳೆ ಶಂಕರ ಅಳ್ಕೊಳ್ಳಿ ಹೈವೇ ಪೆಟ್ರೋಲಿಂಗ್ ವಾಹನದಲ್ಲಿ ಪರಾರಿಯಾಗಿ ಪ್ರಾಣ ಉಳಿಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಧಾಬಾದಲ್ಲಿ ನಡೆಯುತ್ತಿರುವ ಗದ್ದಲ ನೋಡಿದ ಹೈವೇ ಪೆಟ್ರೋಲಿಂಗ್ ವಾಹನದಲ್ಲಿದ್ದ ಪೊಲೀಸರು ಧಾಬಾಕ್ಕೆ ಬಂದಿದ್ದಾರೆ. ಪೊಲೀಸರು ವಾಹನದ ಕೀ ಅಲ್ಲೆ ಬಿಟ್ಟಿದ್ದರಿಂದ ಶಂಕರ ವಾಹನದ ಹಿಂದೆ ಕುಳಿತಿದ್ದಾನೆ. ಆರೋಪಿಗಳು ಹೈವೇ ಪೆಟ್ರೋಲಿಂಗ್ ವಾಹನದ ಮೇಲೆ ದಾಳಿ ಮಾಡಿದಾಗ, ಶಂಕರ ಚಾಲಕನ ಸ್ಥಾನದಲ್ಲಿ ಕುಳಿತು ತಾನೇ ವಾಹನ ಚಲಾಯಿಸಿಕೊಂಡು ಕಲಬುರಗಿಯತ್ತ ಹೋಗಿದ್ದಾನೆ ಎಂದು ತಿಳಿದು ಬಂದಿದೆ.

ಆರೋಪಿಗಳು ತಮ್ಮ ವಾಹನದಲ್ಲಿ ಬೆನ್ನು ಹತ್ತಿದಾಗ, ಮರತೂರ ಕ್ರಾಸ್‌ನತ್ತ ಹೊರಳಿ ಮರತೂರ ಸ್ಟೇಷನ್‌ ತಾಂಡಾದ ಬಳಿ ರಸ್ತೆ ಬದಿಗೆ ಇದ್ದ ಕಟ್ಟಿಗೆ ತುಂಡುಗಳಿಗೆ ಗುದ್ದಿದ್ದಾನೆ. ಇದರಿಂದ ಹೈವೇ ಪೆಟ್ರೋಲಿಂಗ್ ವಾಹನ ಕೂಡ ಜಖಂ ಆಗಿದೆ ಎಂದು ತಿಳಿದುಬಂದಿದೆ.

ಗಾಯಗೊಂಡ ಶಂಕರ ಅಳ್ಕೊಳ್ಳಿಯನ್ನು ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಕಲಬುರಗಿ ಐಜಿಪಿ, ಎಸ್‌ಪಿ ಅಡ್ಡೂರು ಶ್ರೀನಿವಾಸುಲು, ಡಿವೈಎಸ್ಪಿ ಶಂಕರಗೌಡ ಪಾಟೀಲ, ಪಿಐ ನಟರಾಜ ಲಾಡೆ, ಬೆರಳಚ್ಚು ತಜ್ಞರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಶಹಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳನ್ನು ಬಂಧಿಸಲು ಬಲೆ ಬೀಸಿದ್ದಾರೆ ಎಂದು ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್‌ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News