ಕಲಬುರಗಿ | ಜ.24ರಂದು ಬೆಂಗಳೂರಿನಲ್ಲಿ ಸನ್ನತಿ ಪಂಚಶೀಲ ಪಾದಯಾತ್ರೆ ಸಮಾರೋಪ : ಎ.ಬಿ.ಹೊಸಮನಿ
ಕಲಬುರಗಿ : ಕಳೆದ ವರ್ಷ ನ.15ರಂದು ಚಿತ್ತಾಪೂರ ತಾಲ್ಲೂಕಿನ ಸನ್ನತಿಯಿಂದ ಪ್ರಾರಂಭವಾದ ಪಂಚಶೀಲ ಪಾದಯಾತ್ರೆಯು ಜ.24 ರಂದು ಬೆಂಗಳೂರಿನ ಫ್ರೀಡಮ್ ಪಾರ್ಕ್ ನಲ್ಲಿ ಸಮಾರೋಪ ನಡೆಯಲಿದೆ ಎಂದು ಸಮಿತಿಯ ಮುಖಂಡ, ಹೋರಾಟಗಾರ ಎ.ಬಿ.ಹೊಸಮನಿ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೌದ್ಧ ಐತಿಹಾಸಿಕ ಕ್ಷೇತ್ರ ಸನ್ನತಿ ಅಭಿವೃದ್ಧಿ ಮಂಡಳಿ ಪೂರ್ಣ ಪ್ರಮಾಣದಲ್ಲಿ ರಚಿಸಿ, ಆಂಧ್ರಪ್ರದೇಶದ ಬುದ್ಧವನ ಮಾದರಿಯಲ್ಲಿ ಅಭಿವೃದ್ದಿ ಪಡಿಸಲೂ ಆಗ್ರಹಿಸಿ ಮತ್ತು ಬೌದ್ಧ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಾಡಿನ ಚಿಕ್ಕು ಮತ್ತು ಚಿಕ್ಕುಣಿ ಸಂಘದ ಪೂಜ್ಯ ಭಂತೆ ಭೋಧಿದತ್ತ ಅವರ ನೇತೃತ್ವದಲ್ಲಿ ನಡೆದಿರುವ ಪಂಚಶೀಲ ಪಾದಯಾತ್ರೆ ಜ.24ರಂದು ಬೆಳಗ್ಗೆ 9:00 ಗಂಟೆಗೆ ನಾಗಸೇನ ಬುದ್ಧ ವಿಹಾರದಿಂದ ಹೊರಟು ಬೆಂಗಳೂರು ಫ್ರೀಡಮ್ ಪಾರ್ಕ ತಲುಪಲಿದೆ. ಇಲ್ಲಿಯೇ ಹತ್ತು ಸಾವಿರ ಕ್ಕೂ ಹೆಚ್ಚು ಜನರು ಭಾಗವಹಿಸುವ ಸಮಾರೋಪ ಸಮಾರಂಭ ಜರುಗಲಿದೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಅಶ್ವಿನಿ ಮದನಕರ್ ಮಾತನಾಡಿ, ಬೌದ್ಧ ಐತಿಹಾಸಿಕ ಕ್ಷೇತ್ರ ಸನ್ನತಿ ಅಭಿವೃದ್ಧಿ ಮಂಡಳಿ ಪೂರ್ಣ ಪ್ರಮಾಣದಲ್ಲಿ ರಚಿಸಿ ಸನ್ನತಿ ಅಭಿವೃದ್ಧಿ ಪ್ರಾಧಿಕಾರದ ಯೋಜನೆಯನ್ನು ಆಂಧ್ರದ ಬುದ್ಧವನ ಮಾದರಿಯಲ್ಲಿ ಕನಿಷ್ಠ 200 ಎಕರೆ ಪ್ರದೇಶದಲ್ಲಿ ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿಪಡಿಸಿ ಸನ್ನತ್ತಿಯನ್ನು 7ಸ್ಪಾರ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಮಾಡಬೇಕು, ಪರಿಶಿಷ್ಟ ಜಾತಿಯ ಬೌದ್ಧರ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗಾಗಿ ಕರ್ನಾಟಕ ಬೌದ್ಧ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು, ಬೌದ್ಧರ ಸರ್ವಾಂಗಣ ಅಭಿವೃದ್ಧಿ ಹಾಗೂ ಬೌದ್ಧ ಕ್ಷೇತ್ರಗಳ ಅಭಿವೃದ್ಧಿಗಾಗಿ ಕನಿಷ್ಠ 1,000 ಕೋಟಿ ರೂ. ಅನುದಾನ ಈ ಬಜೆಟ್ನಲ್ಲಿ ವದಗಿಸಬೇಕು ಮತ್ತು ಪ್ರತಿ ವರ್ಷ ಮಹಾತ್ಮ ಗೌತಮ್ ಬುದ್ಧ ಜಯಂತಿಗೆ ಸಾರ್ವತ್ರಿಕ ರಜೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯಾದ್ಯಾಂತ ಬುದ್ಧ ವಿಹಾರಗಳ ನಿರ್ವಹಣೆಗಾಗಿ ಮುಜರಾಯಿ ಇಲಾಖೆಯಿಂದ ಅನುದಾನ ನೀಡುವುದು, ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಎಲ್ಲ ಬುದ್ಧವಿಹಾರಗಳಿಗೆ ಮೂಲಸೌಕರ್ಯಗಳಾದ ಸಂಪರ್ಕ ರಸ್ತೆ, ಬೀದಿ ದೀಪ, ಕುಡಿಯುವ ನೀರಿನ ಸೌಕರ್ಯ ವದಗಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಹೋರಾಟಗಾರ ಸುನೀಲ್ ಮಾನ್ಪಡೆ, ಸೂರ್ಯಕಾಂತ ನಿಂಬಾಳ್ಕರ್ ಸೇರಿದಂತೆ ಮತ್ತಿತರರು ಹಾಜರಿದ್ದರು.