ಕಲಬುರಗಿ | ಮಹಿಳಾ ಸಬಲೀಕರಣಕ್ಕೆ ಶರಣಸಂಸ್ಥಾನದ ಕೊಡುಗೆ ಅಪಾರ: ಡಾ.ವಿಲಾಸವತಿ ಖೂಬಾ
ಕಲಬುರಗಿ : ಈ ಭಾಗದ ಮಹಿಳೆಯರು ಸಬಲರಾಗಲು ಶರಣಬಸವೇಶ್ವರ ಸಂಸ್ಥಾನದ ಕೊಡುಗೆ ಅಪಾರವಾಗಿದೆ ಎಂದು ಬಸವ ಸಮಿತಿಯ ಅಧ್ಯಕ್ಷೆ ಡಾ.ವಿಲಾಸವತಿ ಖೂಬಾ ಹೇಳಿದರು.
ನಗರದ ಗೋದುತಾಯಿ ಮಹಾವಿದ್ಯಾಲಯದಲ್ಲಿ ಶನಿವಾರ ಶರಣಬಸವ ವಿಶ್ವವಿದ್ಯಾಲಯ, ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಣಿಕ ಮಹಾಸಂಘ, ಗೋದುತಾಯಿ ಬಿ.ಈಡ್ ಮಹಿಳಾ ಮಹಾವಿದ್ಯಾಲಯ ಮತ್ತು ಗೋದುತಾಯಿ ಪದವಿ ಮಹಾವಿದ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ಮಹಿಳಾ ಯೋಧರು : ರಾಣಿ ಅಬ್ಬಕ್ಕ ಚೌಟಾ, ರಾಣಿ ಕಿತ್ತೂರು ಚೆನ್ನಮ್ಮ, ಅಹಲ್ಯಬಾಯಿ ಹೊಳ್ಕರ್ ಮತ್ತು ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ಮಹಿಳಾ ಸಬಲೀಕರಣಕ್ಕೆ ಕೊಡುಗೆಗಳು ಎಂಬ ವಿಷಯದ ಮೇಲೆ ನಡೆದ ಒಂದು ದಿನದ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಪೂಜ್ಯ ದೊಡ್ಡಪ್ಪ ಅಪ್ಪ ಮತ್ತು ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ಮಹಿಳೆಯರು ಉನ್ನತವಾಗಿ ಬೆಳವಣಿಗೆಗೆ ಕಾರಣಿಕರ್ತರಾಗಿದ್ದಾರೆ. ಅವರು ತೋರಿದ ದಾರಿ ನಾವು ನಡೆಯಬೇಕು ಮತ್ತು ಶರಣರ ತತ್ವಗಳು, ವಚನಗಳು ಪಾಲಿಸಬೇಕು, ಉಳಿಸಬೇಕು, ಬೆಳೆಸಬೇಕು ಎಂದು ಹೇಳಿದರು.
ಬೀದರ್ ಲಿಂಗರಾಜಪ್ಪ ಇಂಜಿನಿಯರಿoಗ್ ಕಾಲೇಜಿನ ನಿರ್ದೇಶಕರಾದ ಡಾ.ಉಮಾತಾಯಿ ಬಿ.ದೇಶಮುಖ ಮಾತನಾಡಿ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂದು ಮನಗಂಡ ಪೂಜ್ಯ ದೊಡ್ಡಪ್ಪ ಅಪ್ಪ ಅವರು ಮಹಿಳೆಯರಿಗಾಗಿಯೇ ಶಿಕ್ಷಣವೆಂಬ ಸಸಿಯನ್ನು ನೆಟ್ಟರು ಅದನ್ನು ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ಹೆಮ್ಮರವಾಗಿ ಬೆಳೆಸಿ ಇಂದು ಕಲ್ಯಾಣ ಕರ್ನಾಟಕದ ಹೆಣ್ಣು ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳಲ್ಲಿದ್ದಾರೆ ಎಂದು ತಿಳಿಸಿದರು.
ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಗಣಪತಿ ಬಿ. ಸಿನ್ನೂರ ಮಾತನಾಡಿ, ಡಾ.ಅಪ್ಪ ಅವರು ಶಿಕ್ಷಣದ ಭದ್ರ ಬುನಾದಿ ಹಾಕಿ ಮಹಿಳಾ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟು, ಮಹಿಳೆಯರು ಯಾವುದರಲ್ಲೂ ಕಡಿಮೆ ಇಲ್ಲವೆಂದು ತೋರಿಸಿಕೊಟ್ಟಿದ್ದಾರೆ. ಮಹಿಳಾ ಯೋಧರಾದ ರಾಣಿ ಅಬ್ಬಕ್ಕ ಚೌಟಾ, ರಾಣಿ ಕಿತ್ತೂರು ಚೆನ್ನಮ್ಮ, ಅಹಲ್ಯಬಾಯಿ ಹೊಳ್ಕರ್ ಅವರ ಧೈರ್ಯ, ಸಾಹಸದ ಕುರಿತು ಹೇಳಿದರು.
ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ ಕಾಲೇಜುಗಳ ನಿರ್ದೇಶಕರಾದ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಕಲ್ಪನಾ ಭೀಮಳ್ಳಿ ವಹಿಸಿ ಮಾತನಾಡಿದರು. ವೇದಿಕೆ ಮೇಲೆ ಗೋದುತಾಯಿ ದೊಡ್ಡಪ್ಪ ಅಪ್ಪ ಪದವಿ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಪುಟ್ಟಮಣಿ ದೇವಿದಾಸ ಇದ್ದರು.
ಪ್ರಾಚಾರ್ಯೆ ಡಾ.ಕಲ್ಪನಾ ಭೀಮಳ್ಳಿ ಸ್ವಾಗತಿಸಿದರು, ಪ್ರಾಧ್ಯಾಪಕರಾದ ಸುಪ್ರೀಯಾ ನಾಗಶೆಟ್ಟಿ ನಿರೂಪಿಸಿದರೆ, ಅಶ್ವಿನಿ ವಂದಿಸಿದರು. ಸಂಗೀತ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕ, ಶಿಕ್ಷಕೇತರರು ಮತ್ತು ವಿದ್ಯಾರ್ಥಿನಿಯರು ಇದ್ದರು.