ಕಲಬುರಗಿ | ನನಗೆ ಗನ್ ಸಿಕ್ಕರೆ ಭ್ರಷ್ಟ ಅಧಿಕಾರಿಗಳನ್ನು ಉಡಾಯಿಸುವೆ ಎಂದಿದ್ದ ಶಿಕ್ಷಕ ಅಮಾನತು
ʼವಾರ್ತಾಭಾರತಿʼ ವರದಿ ಫಲಶ್ರುತಿ
ಕಲಬುರಗಿ: ಕುಡಿದ ಮತ್ತಿನಲ್ಲಿ ಸಿಗರೇಟ್ ಸೇದುತ್ತಾ ಶಿಕ್ಷಕನೋರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಅವಾಚ್ಯವಾಗಿ ನಿಂದಿಸಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಬೆನ್ನಲ್ಲೇ ಶಿಕ್ಷಕನನ್ನು ಅಮಾನತ್ತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಚಿಂಚೋಳಿ ತಾಲ್ಲೂಕಿನ ಶೇರಿಭಿಕನಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಗುರುರಾಜ ಕುಲಕರ್ಣಿ ಅಮಾನತುಗೊಂಡಿದ್ದಾರೆ.
ಗುರುರಾಜ ಕುಲಕರ್ಣಿ ಸಹ ಶಿಕ್ಷಕರು ಸ.ಕಿ.ಪ್ರಾ. ಶಾಲೆ ಶೇರಿಬಿಕನಳ್ಳಿ ತಾ/ಚಿಂಚೋಳಿ ಜಿಲ್ಲೆ ಕಲಬುರಗಿ ಇವರು ಕರ್ನಾಟಕ ನಾಗರೀಕ ಸೇವಾ ನಿಯಮ(ನಡತೆ) ನಿಯಮಗಳು-2021ರ ನಿಯಮ - 3 ರ ಉಪನಿಯಮ (1)ರ (i),(ii), (iii) ಉಪ ನಿಯಮ (2) (i), (iii), (iv) ಉಪನಿಯಮ 5 ರ (ix).(x) (xi), (xiv) ಉಲ್ಲಂಘಿಸಿ, ಕರ್ತವ್ಯ ಲೋಪವೆಸಗಿರುವದು ಮೇಲ್ನೋಟಕ್ಕೆ ಸಾಬಿತಾಗಿರುವುದರಿಂದ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲಕ್ಷ್ಮಯ್ಯ ಅವರು ಆದೇಶ ಹೊರಡಿಸಿದ್ದಾರೆ.
ಅಮಾನತ್ತಿನ ಅವಧಿಯಲ್ಲಿ ಕೇಂದ್ರ ಕಾರ್ಯಸ್ಥಾನ ಬಿಡುತಕ್ಕದ್ದಲ್ಲ. ಅಮಾನತ್ತಿನ ಅವಧಿಯಲ್ಲಿ ಶೇ% 50 ರಷ್ಟು ಜೀವನಾಂಶ ಭತ್ಯೆಗೆ ಅರ್ಹರಿರುತ್ತಾರೆ. ಅಮಾನತ್ತಿನ ಲೀನ ಶಿಫ್ಟ್ ಅದೇ ಶಾಲೆಯಲ್ಲಿ ಮುಂದುವರೆಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
'ಇಲಾಖೆಯ ಅಧಿಕಾರಿಗಳೆಲ್ಲ ಹಣಕ್ಕಾಗಿ ಪೀಡಿಸುತ್ತಿದ್ದು ಭ್ರಷ್ಟರಾಗಿದ್ದಾರೆ. ಒಂದು ಸಾರಿ ನನ್ನನ್ನು ಸಸ್ಪೆಂಡ್ ಮಾಡುತ್ತಾರೆ. ಸಸ್ಪೆಂಡ್ ಮಾಡಿದರೂ ನಾನೇನೂ ಹೆದರಲ್ಲ. ಸಸ್ಪೆಂಡ್ ಅಂದ್ರೆ ಏನು? ಮೂರು ತಿಂಗಳು ಮನೆಯಲ್ಲೇ ಇದ್ದು ಅರ್ಧ ಪಗಾರ ತಗೊಳೋದು. ಮತ್ತೆ ಬೇಡಿದ್ದ ಜಾಗಕ್ಕೆ ಹೋಗುವುದು. ವರ್ಗಾವಣೆ ಪಡೆಯಲು ಸಾಕಷ್ಟು ಸಮಯ ಬೇಕಾಗುತ್ತದೆ. ಅದರ ಬದಲು ಅಮಾನತ್ತಾಗಿ ವರ್ಗಾವಣೆಯಾಗುವುದು ಶಾರ್ಟ್ ಕಟ್ ರಸ್ತೆಯಾಗಿದೆ' ಎಂದು ಶಿಕ್ಷಕರು ವೀಡಿಯೊದಲ್ಲಿ ಹೇಳಿದ್ದರು.
ಅಲ್ಲದೆ, ನನ್ನ ಕೈಯಲ್ಲಿ ಗನ್ ಸಿಕ್ಕರೆ ಭ್ರಷ್ಟ ಅಧಿಕಾರಿಗಳಿಗೆ ಉಡಾಯಿಸುವುದಾಗಿ ಹೆದರಿಸಿದ್ದಾರೆ. ಬಾಯಿ ಬಿಟ್ಟು ಇಷ್ಟು ಲಂಚ ಕೊಡಿ ಎಂದು ಹೇಳಿ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಶಿಕ್ಷಕ ಅವಾಜ್ ಹಾಕಿರುವುದು ವಿಡಿಯೋದಲ್ಲಿ ಸೆರೆಯಾಗಿತ್ತು.
ವೀಡಿಯೋ ವೈರಲ್ ಆಗಿರುವ ಬೆನ್ನಲ್ಲೇ 'ವಾರ್ತಾ ಭಾರತಿ' ಸುದ್ದಿ ಪ್ರಕಟಿಸಿತ್ತು. ವಾರ್ತಾ ಭಾರತಿಯಲ್ಲಿ ಪ್ರಕಟಗೊಂಡ ಸುದ್ದಿ ತಿಳಿದ ಕಲಬುರಗಿ ಡಿಡಿಪಿಐ ಸೂರ್ಯಕಾಂತ ಮದಾನೆ ಅವರು ಅಮಾನತ್ತಿಗೆ ಚಿಂಚೋಳಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚಿಸಿದ್ದರು.
ಡಿಡಿಪಿಐ ಸೂಚನೆ ಮೇರೆಗೆ ಸಹ ಶಿಕ್ಷಕ ಗುರುರಾಜ್ ಕುಲಕರ್ಣಿ ಅವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.