×
Ad

ಕಲಬುರಗಿ | ಕಳ್ಳತನ ಪ್ರಕರಣ : ನಾಲ್ವರ ಬಂಧನ, 8.95 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ವಶ

Update: 2025-07-08 18:09 IST

ಕಲಬುರಗಿ: ಕಳೆದ ಜೂ.22 ರಂದು ಶಹಾಬಾದ್‌ ನಗರದ ಮನೆಯೊಂದರಲ್ಲಿ ನಡೆದ 15.26 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅಂತರಾಜ್ಯ ದರೋಡೆಕೋರರನ್ನು ಬಂಧಿಸಿ, ಅವರಿಂದ 8.95 ಲಕ್ಷ ಮೌಲ್ಯದ ಆಭರಣ, ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ 5 ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ತಿಳಿಸಿದ್ದಾರೆ

ನಗರದ ಜಿಲ್ಲಾ ಪೊಲೀಸ್ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಹಾಬಾದ್ ಧಕ್ಕಾ ತಾಂಡಾದ ನಿವಾಸಿ ರವಿ ಶಂಕರ್ ರಾಠೋಡ್ (42), ಮಹಾರಾಷ್ಟ್ರದ ಅಕ್ಕಲಕೋಟ್ ನ ಶಿವಾಜಿ ನಗರ ತಾಂಡಾದ ಮಹಾದೇವ ಉಮಲು ರಾಠೋಡ್(28), ಖ್ಯಾದಾಪುರ ತಾಂಡಾದ ಶಿವುಕುಮಾರ ದೀಪಲು ರಾಠೋಡ್(25) ಹಾಗೂ ಆಣಗೇರಿ ತಾಂಡಾದ ಗೋಪಾಲ ಮೇಘು ನಾಯಕ್(30) ಬಂಧಿತ ಆರೋಪಿಗಳಗಿದ್ದು, ಇನ್ನೋರ್ವ ಆರೋಪಿ ಅಕ್ಕಲಕೋಟ್ ನ ಶಿವಾಜಿ ನಗರ ತಾಂಡಾದ ನಿವಾಸಿ ಸುನೀಲ್ ಬಾಬು ರಾಠೋಡ್ ಎಂಬಾತ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗೆ ಜಾಲ ಬೀಸಲಾಗಿದೆ ಎಂದರು.

ಬಂಧಿತ ನಾಲ್ವರು ದರೋಡೆಕೋರರಿಂದ 135 ಗ್ರಾಂ ಚಿನ್ನ, 550 ಗ್ರಾಂ ಬೆಳ್ಳಿ, 40 ಸಾವಿರ ರೂಪಾಯಿ ನಗದು ಹೀಗೆ ಒಟ್ಟು 15 ಲಕ್ಷ 26 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಹಾಗೂ ಕೃತ್ಯಕ್ಕೆ ಬಳಸಿದ 5 ಚಾಕುಗಳನ್ನು ಕರ್ನಾಟಕ ಗಡಿ ಭಾಗದ ಅಕ್ಕಲಕೋಟ ರಾಷ್ಟ್ರೀಯ ಹೆದ್ದಾರಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರಕರಣದ ಪತ್ತೆ ಕುರಿತು ಅಪರ ಪೊಲೀಸ್‌ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ, ಶಹಾಬಾದ ಉಪ-ವಿಭಾಗದ ಡಿ.ಎಸ್.ಪಿ.ಶಂಕರಗೌಡ ಪಾಟೀಲ್ ಅವರ ಮಾರ್ಗದರ್ಶನದಲ್ಲಿ, ಶಹಾಬಾದ್‌ ನಗರ ಠಾಣೆ ಪಿ.ಐ ನಟರಾಜ ಲಾಡ ಅವರ ನೇತೃತ್ವದಲ್ಲಿ, ಪಿ.ಎಸ್.ಐ, ಶಾಮರಾಯ, ಎ.ಎಸ್.ಐಗಳಾದ ಮಲ್ಲಿಕಾರ್ಜುನ, ಗುಂಡಪ್ಪಾ, ಸಿಬ್ಬಂದಿಯವರಾದ ನಾಗೇಂದ್ರ, ಮಲ್ಲಿಕಾರ್ಜುನ, ಬಲರಾಮ, ಸಂತೋಷ, ಹುಸೇನ ಪಾಷ, ಬಿಳಿಯನಸಿದ್ದಯ್ಯಾ, ಆರೀವ್, ರಮೇಶ ಅವರನ್ನೊಳಗೊಂಡ ಎರಡು ತಂಡಗಳಾಗಿ ರಚನೆ ಮಾಡಲಾಗಿತ್ತು. ಪ್ರಕರಣ ಪತ್ತೆ ಮಾಡಿದ ತಂಡದ ಕಾರ್ಯಕ್ಕೆ ಮತ್ತು ಪ್ರಕರಣ ಪತ್ತೆ ಹಚ್ಚುವಲ್ಲಿ ಮಹತ್ವದ ಸುಳಿವು ನೀಡಿದ ಶ್ವಾನ ದಳದ ಪಾತ್ರಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸಿ, ಪ್ರಶಂಸನಾ ಪತ್ರ ನೀಡಿ ಗೌರವಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News