ಕಲಬುರಗಿ | ಎಸೆಸೆಲ್ಸಿ ಫಲಿತಾಂಶ ಸುಧಾರಣೆಗೆ ಕಾಲಮಿತಿ ಯೋಜನೆ ಅಗತ್ಯ : ಶಶೀಲ್ ನಮೋಶಿ
ಕಲಬುರಗಿ : ಕಳೆದ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಕುಸಿದಿದ್ದರೂ, ಆತ್ಮಸ್ಥೈರ್ಯ ಕಳೆದುಕೊಳ್ಳದೇ ಅದರ ಸುಧಾರಣೆಗಾಗಿ ಕಾಲಮಿತಿ ಯೋಜನೆ ರೂಪಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಹೇಳಿದರು.
ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ರವಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ ಹತ್ತನೇ ಪರೀಕ್ಷೆಯ ಕನ್ನಡ ವಿಷಯದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹತ್ತರ ಕನ್ನಡಕೆ ಗುಣಾಗ್ರಣಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳು ಸತತವಾಗಿ ಓದುವ ಮೂಲಕ ಫಲಿತಾಂಶ ಹೆಚ್ಚಳಕ್ಕೆ ಮುಂದಾಗಬೇಕು. ಜೊತೆಗೆ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಶೀಘ್ರವೇ ನೇಮಕ ಮಾಡಿಕೊಳ್ಳಬೇಕು ಮತ್ತು ಮಕ್ಕಳಲ್ಲಿ ಓದು ಬರೆಯುವ ಆಸಕ್ತಿ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಫಲಿತಾಂಶ ಸುಧಾರಣೆಗೊಳ್ಳಲು ಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಡಿಡಿಪಿಐ ಸೂರ್ಯಕಾಂತ ಮದಾನೆ ಮಾತನಾಡಿ, ಫಲಿತಾಂಶ ಸುಧಾರಣೆಗೆ ಕನ್ನಡ ಭಾಷೆಯನ್ನು ಓದುವ ಹವ್ಯಾಸವ ರೂಢಿಸಿಕೊಳ್ಳಬೇಕು. ಈ ಬಾರಿಯ ಫಲಿತಾಂಶ ಪ್ರತಿಶತದಲ್ಲಿ ಸುಧಾರಣೆಯಾಗಿದ್ದು, ಪರೀಕ್ಷೆ 2 ರಲ್ಲಿ ಇನ್ನಷ್ಟು ನಿರೀಕ್ಷೆ ಹೊಂದಲಾಗಿದೆ. ಇಂಥ ಕುಸಿತಕ್ಕೆ ಯಾರನ್ನು ಹೊಣೆಗಾರರನ್ನಾಗಿ ಮಾಡದೇ ಸಾಮೂಹಿಕ ಜವಾಬ್ದಾರಿ ಹೊರಬೇಕಾಗಿದೆ. ಪೋಷಕರ ಸಹಕಾರ ಮುಖ್ಯವಾಗಿದೆ. ಸರಕಾರಿ ಶಾಲೆಗಳಲ್ಲಿ ಓದಿದ ಮಕ್ಕಳು ಇಂದು ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿದರು.
ಜಿಲ್ಲಾ ಸರಕಾರಿ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಹೇಶ ಹೂಗಾರ, ಕಲ್ಯಾಣ ಕರ್ನಾಟಕದ ನೌಕರರ ಸಂಘದ ಅಧ್ಯಕ್ಷ ಮಹೇಶಕುಮಾರ ಹೆಬ್ಬಾಳೆ, ಎಕೆಆರ್ ದೇವಿ ಪಿಯು ಕಾಲೇಜಿನ ಆಡಳಿತಾಧಿಕಾರಿ ವಿದ್ಯಾಸಾಗರ ದೇಶಮುಖ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ರವೀಂದ್ರಕುಮಾರ ಭಂಟನಳ್ಳಿ, ಸಿದ್ಧಲಿಂಗ ಬಾಳಿ, ರಾಜೇಂದ್ರ ಮಾಡಬೂಳ, ಗಣೇಶ ಚಿನ್ನಾಕಾರ, ಧರ್ಮರಾಜ ಜವಳಿ, ಕಲ್ಯಾಣಕುಮಾರ ಶೀಲವಂತ, ಸುರೇಶ ದೇಶಪಾಂಡೆ, ಸುರೇಶ ದೇಶಪಾಂಡೆ, ಶರಣಬಸಪ್ಪ ಕೋಬಾಳ, ಸಂತೋಷ ಕುಡಳ್ಳಿ, ಪ್ರಭುಲಿಂಗ ಮೂಲಗೆ, ಶಿವಲೀಲಾ ಕಲಗುರ್ಕಿ, ಶರಣಬಸಪ್ಪ ನರೂಣಿ, ಶಕುಂತಲಾ ಪಾಟೀಲ, ಎಂ.ಎನ್. ಸುಗಂಧಿ, ದಿನೇಶ ಮದಕರಿ, ರಮೇಶ ಡಿ ಬಡಿಗೇರ, ಸಂದೀಪ ಭರಣಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.