×
Ad

ಕಲಬುರಗಿ | ಯಲ್ಲಮ್ಮ ದೇವಿ ಬೆಳ್ಳಿ ಮೂರ್ತಿಯ ಎರಡು ಕೈ ಕತ್ತರಿಸಿ ಕಳ್ಳತನ : ಪ್ರಕರಣ ದಾಖಲು

Update: 2025-09-17 15:51 IST

ಕಲಬುರಗಿ (ಚಿತ್ತಾಪುರ): ಚಿತ್ತಾಪುರ ಪಟ್ಟಣದ ಬಾಹರಪೇಟ್ ಸಮೀಪದ ಕೊತಲಾಪೂರ ಯಲ್ಲಮ್ಮ ದೇವಾಲಯದಲ್ಲಿ ಯಲ್ಲಮ್ಮ ದೇವಿಯ ಬೆಳ್ಳಿ ಮೂರ್ತಿಯ ಎರಡು ಕೈ ಕತ್ತರಿಸಿ ಕಳ್ಳತನ ನಡೆಸಿದ ಘಟನೆ ಬುಧವಾರ ಬೆಳಕಿಗೆ ಬಂದಿದೆ.

ನವರಾತ್ರಿ ನಿಮಿತ್ತ ದೇವಸ್ಥಾನದಲ್ಲಿ ನಡೆಯುತ್ತಿದ್ದ ಅಲಂಕಾರ ಕಾರ್ಯ ಮಂಗಳವಾರ ಕೊನೆ ಹಂತಕ್ಕೆ ತಲುಪಿತ್ತು. ಉಳಿದ ಕೆಲಸವನ್ನು ನಾಳೆ ಮಾಡಬೇಕೆಂದು ದೇವಸ್ಥಾನದ ಬಾಗಿಲಿಗೆ ಕೀಲಿಕೈ ಹಾಕಿ ಮುಚ್ಚಲಾಗಿತ್ತು. ಆದರೆ, ಬುಧವಾರ ಬೆಳಿಗ್ಗೆ ಪೂಜಾ ಕಾರ್ಯಕ್ಕಾಗಿ ಬಂದ ಅರ್ಚಕ ಮಂಜುನಾಥ ಅವರು, ಗೇಟ್‌ನ ಕೀಲಿಕೈ ಮುರಿದು ಬಿದ್ದಿರುವುದನ್ನು ಕಂಡು ಒಳಗೆ ಪ್ರವೇಶಿಸಿದಾಗ, ದೇವಿಯ ಬೆಳ್ಳಿ ಮೂರ್ತಿಯ ಎರಡು ಕೈಗಳನ್ನು ಕತ್ತರಿಸಿ ಕಳ್ಳತನ ಮಾಡಿರುವುದು ಪತ್ತೆಯಾಗಿದೆ.

ಅಲ್ಲದೆ, ಬೆಳ್ಳಿಯ ಕಣ್ಣು ಬಿಟ್ಟು, ಪಾದುಕೆ, ತಟ್ಟೆ ಸೇರಿದಂತೆ ಹಲವು ವಸ್ತುಗಳು ಕಳವಾಗಿದ್ದು, ದೇವಿಯ ಸಂಪೂರ್ಣ ಮೂರ್ತಿಯನ್ನೇ ಕಳ್ಳತನ ಮಾಡಲು ಪ್ರಯತ್ನ ನಡೆಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ಪಿಎಸ್‌ಐ ಶ್ರೀಶೈಲ್ ಅಂಬಾಟಿ, ರವಿಕುಮಾರ, ಬಸವರಾಜ ಸೇರಿದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಬಂಧ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News