ಕಲಬುರಗಿ: ಅನೈತಿಕ ಪೊಲೀಸ್ ಗಿರಿ ಪ್ರಕರಣ; 6 ಮಂದಿಯ ಬಂಧನ
ಕಲಬುರಗಿ: ನಗರದ ಸಂತ್ರಾಸವಾಡಿ ಪ್ರದೇಶದಲ್ಲಿ ಯುವತಿಗೆ ಲಿಫ್ಟ್ ಕೊಟ್ಟ ಯುವಕನ ಮೇಲೆ ಹಲ್ಲೆ ನಡೆಸಿ, ಅನೈತಿಕ ಪೊಲೀಸ್ ಗಿರಿ ಮೆರೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಮಹ್ಮದ್ ಸಲ್ಮಾನ್(20), ಮಹ್ಮದ್ ಆದಿಲ್(19), ಮಹ್ಮದ್ ರೆಹಾನ್(21), ಮಹ್ಮದ್ ಉಜೈರ್(20), ಮಹ್ಮದ್ ಫೈಜ್(23), ಮಹ್ಮದ್ ಆಸಿಫ್(28) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಬೈಲಪ್ಪ, ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಬೇರೆ ಧರ್ಮದ ಯುವತಿಗೆ ಬೈಕ್ ಮೇಲೆ ಡ್ರಾಪ್ ಮಾಡಿದ್ದ ವೇಳೆ ಕೆಲ ಯುವಕರಿಂದ ಮಾರಣಾಂತಿಕ ಹಲ್ಲೆಗೊಳಗಾಗಿ, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.
ಈ ಕುರಿತು ಹಲ್ಲೆಗೆ ಒಳಗಾಗಿದ್ದ ಬೈಲಪ್ಪ, ಎಂ.ಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸದ್ಯ 6 ಆರೋಪಿಗಳನ್ನು ಬಂಧಿಸಿದ್ದು, ಇನ್ನುಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ನಗರ ಪೊಲೀಸರು ತಿಳಿಸಿದ್ದಾರೆ.