×
Ad

ಕಲಬುರಗಿ : ಐಟಿಎಫ್ ಮಹಿಳಾ ಟೆನಿಸ್ ಟೂರ್ನಿ: ಸಿಂಗಲ್ಸ್ ನಲ್ಲಿ ವೈಷ್ಣವಿ ಚಾಂಪಿಯನ್

Update: 2026-03-08 11:53 IST

ಕಲಬುರಗಿ: ಇಲ್ಲಿ ನಡೆಯುತ್ತಿರುವ ಐಟಿಎಫ್ ಮಹಿಳಾ ಟೆನಿಸ್ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ವೈಷ್ಣವಿ ಅಡ್ಕರ್ ಅವರು ಅಂಕಿತಾ ರೈನಾರನ್ನು ಸೋಲಿಸುವುದರ ಮೂಲಕ ಟೂರ್ನಿಯ ಚಾಂಪಿಯನ್ ಪಟ್ಟ ಅಲಂಕರಿಸಿದರು.

ನಗರದ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ರವಿವಾರ ಬೆಳಗ್ಗೆ ನಡೆದಿದ್ದ ಐಟಿಎಫ್ ಮಹಿಳಾ ಟೆನಿಸ್ ಟೂರ್ನಿ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಅಂಕಿತಾ ರೈನಾ ವಿರುದ್ಧ 7-6, 6 -4 ನೇರ ಸೆಟ್ ಗಳ ಗೆಲ್ಲುವ ಮೂಲಕ ವೈಷ್ಣವಿ ಅಡ್ಕರ್ ಗೆಲುವಿನ ನಗೆ ಬೀರಿದರು.

ಮೊದಲ ಸೆಟ್ ನಲ್ಲಿ ಟೈ ಬ್ರೇಕರ್ ಆದ ಬಳಿಕ ಭಾರೀ ಪೈಪೋಟಿ ಏರ್ಪಟ್ಟಿತ್ತು. ಕೊನೆಗೆ ವೈಷ್ಣವಿ ಅಂಕ ಗಿಟ್ಟಿಸಿಕೊಂಡು ಮೊದಲ ಸೆಟ್ ಅನ್ನು ತಮ್ಮದಾಗಿಸಿಕೊಂಡರು. ಎರಡನೇ ಸೆಟ್ ನ ಮೊದಲಾರ್ಧದಲ್ಲಿ ವೈಷ್ಣವಿ ಅಡ್ಕರ್ ಅನೇಕ ಶಾಟ್ ಗಳು ನೆಟ್ ಗೆ ಹೊಡೆಯುವ ಮೂಲಕ ಅಂಕಗಳನ್ನು ಅಂಕಿತಾ ರೈನಾಗೆ ಬಿಟ್ಟುಕೊಟ್ಟರು.

ಎರಡನೇ ಸೆಟ್ ನಲ್ಲಿ 2 - 4ರಿಂದ ಹಿನ್ನಡೆಯಲ್ಲಿದ್ದ ಅಂಕಿತಾ ರೈನಾ ಅನುಭವಿ ಕೌಶಲ್ಯ ಮೂಲಕ 4 - 4 ಅಂಕಗಳನ್ನು ಸಾಧಿಸುವ ಮೂಲಕ ಅಂಕಗಳನ್ನು ಸಮಗೊಳಿಸಿದರು. ಬಳಿಕ ಅಂಕಿತಾ ವೈದ್ಯಕೀಯ ತಪಾಸಣೆಗೆ ಒಳಗಾದರು.

ರನ್ನರ್ ಅಪ್ ಅಂಕಿತಾ ರೈನಾ

ಮತ್ತೆ ಪುಟಿದೆದ್ದ ವೈಷ್ಣವಿ ಎರಡನೇ ಸೆಟ್ ನಲ್ಲಿ 6 - 4 ಅಂತರದಲ್ಲಿ ಗೆಲ್ಲುವ ಮೂಲಕ ಸಿಂಗಲ್ಸ್ ವಿಭಾಗದ ಟ್ರೋಫಿ ತಮ್ಮ ಮುಡಿಗೇರಿಸಿಕೊಂಡರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಅವರು ವೈಷ್ಣವಿ ಅಡ್ಕರ್ ಅವರಿಗೆ ಟ್ರೋಫಿ ಹಸ್ತಾಂತರಿಸಿದರು. ಇದೇ ವೇಳೆಯಲ್ಲಿ ಅಂಕಿತಾ ರೈನಾ ರನ್ನರ್ ಅಪ್ ಪ್ರಶಸ್ತಿಯನ್ನು ಸ್ವೀಕರಿಸಿದರು.

ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಶಿಯೇಶನ್ ಜಂಟಿ ಕಾರ್ಯದರ್ಶಿ ಸುನೀಲ್ ಯಜಮಾನ, ಕೈಗಾರಿಕಾ ಇಲಾಖೆಯ ಜಂಟಿ ಕಾರ್ಯದರ್ಶಿ ಅಬ್ದುಲ್ ಅಝೀಮ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸಂಗಮೇಶ್ವರ, ಸೂಪರ್ ವೈಸರ್ ಸುಪ್ರೀತ್, ಪ್ರವೀಣ್ ಪುಣೆ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News