ಕಲಬುರಗಿ | ಬಸವೇಶ್ವರ ಪ್ರತಿಮೆಗೆ ಭಗ್ನ: ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ
ಕಲಬುರಗಿ : ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಗ್ರಾಮವೊಂದರಲ್ಲಿ ವಿಶ್ವಗುರು ಬಸವೇಶ್ವರರ ಪ್ರತಿಮೆಯನ್ನು ಭಗ್ನಗೊಳಿಸಿದ್ದನ್ನು ಖಂಡಿಸಿ, ಆರೋಪಿಗಳಿಗೆ ಕೂಡಲೇ, ಬಂಧಿಸಿ ಗಡಿಪಾರು ಮಾಡಬೇಕೆಂದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಈಡೇರಿಕೆಗೆ ಒತ್ತಾಯಿಸಿ ವೀರಶೈವ ಲಿಂಗಾಯತ ಮಹಾವೇದಿಕೆ ವತಿಯಿಂದ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಎಸ್.ವಿ.ಪಿ.ವೃತ್ತದಲ್ಲಿ ವೀರಶೈವ ಲಿಂಗಾಯತ ಮಹಾವೇದಿಕೆ ಸಮಾಜದ ಪದಾಧಿಕಾರಿಗಳು, ಸ್ವಾಮೀಜಿಗಳು ಹಾಗೂ ನೂರಾರು ಸಂಖ್ಯೆಯಲ್ಲಿ ಯುವಕರು ಜಮಾವಣೆಗೊಂಡು ಬಸವಣ್ಣನವರಿಗೆ ಜೈಕಾರ ಹಾಕುತ್ತಾ, ಟೈರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿ, ಬಸವಣ್ಣನವರಿಗೆ ಅಪಮಾನ ಮಾಡಿದ ಆರೋಪಿಗಳಿಗೆ ಬಂಧಿಸಿ, ಗಡಿಪಾರು ಮಾಡಬೇಕು ಆಗ್ರಹಿಸಿದರು.
ವೀರಶೈವ ಲಿಂಗಾಯತ ಮಹಾ ವೇದಿಕೆ ಜಿಲ್ಲಾಧ್ಯಕ್ಷ ದಯಾನಂದ ಎಂ.ಪಾಟೀಲ್ ಮಾತನಾಡಿ, ವಿಶ್ವಗುರು ಬಸವೇಶ್ವರರ ಪುತ್ಥಳಿಗೆ ಅಪಮಾನ ಸಹಿಸಲಾಗದು, ಕೇವಲ ಪುತ್ಥಳಿಗೆ ಆಗಿರುವ ಅವಮಾನವಲ್ಲ, ಸಮುದಾಯಕ್ಕೆ ಆಗಿರುವ ಅಪಮಾನವಾಗಿದೆ, ಆಗಾಗಿ ಆರೋಪಿಗೆ ಬಂಧಿಸಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಾಳಾ ಶ್ರೀ, ಗುರುಲಿಂಗ್ ಶಿವಾಚಾರ್ಯ, ಸುಗೋರೇಶ್ವರ ಸ್ವಾಮೀಜಿ, ಸಿದ್ದಲಿಂಗ ಶಿವಾಚಾರ್ಯ, ಸಂಗಮೇಶ್ವರ ಸ್ವಾಮೀಜಿ ಧನಲಿಂಗ್ ಶಿವಾಚಾರ್ಯ, ಬಸವಲಿಂಗ ಮಹಾ ಸ್ವಾಮೀಜಿ, ಶಾಂತವಿರ ಮಹಾ ಸ್ವಾಮೀಜಿ, ಮುನಿಂದ್ರ ಶಿವಾಚಾರ್ಯ, ಕರಿಸಿದ್ದೇಶ್ವರ್ ಸ್ವಾಮೀಜಿ, ದಿವ್ಯಾ ಹಾಗರಗಿ, ಲಕ್ಷ್ಮಿಕಾಂತ ಸ್ವಾದಿ, ಎಂ.ಎಸ್.ಪಾಟೀಲ್ ನರಿಬೋಳ, ಸಿದ್ರಾಮಯ್ಯಾ ಎಸ್.ಹಿರೇಮಠ, ಶಿವು ಜೇವರ್ಗಿ ಸೇರಿದಂತೆ ಅನೇಕರು ಹಾಜರಿದ್ದರು.