ಕಲಬುರಗಿ | ಕನ್ನಡದ ಅಸ್ಮಿತೆಗಾಗಿ ಮಹಿಳೆಯರು ಸಾಹಿತ್ಯ ಬರೆಯಲು ಮುಂದಾಗಬೇಕು : ಡಾ.ಶಾರದಾದೇವಿ ಜಾಧವ
ಕಲಬುರಗಿ : ಇಂದಿನ ಮಹಿಳೆಯರು ಅಡುಗೆ ಮನೆಯಿಂದ ಹೊರ ಬಂದು ಕನ್ನಡದ ಅಸ್ಮಿತೆ ಹಾಗೂ ದೂರದೃಷ್ಟಿ, ಸಮಾಜಮುಖಿ ಚಿಂತನೆಗಳ ಸಾಹಿತ್ಯ ರಚನೆಯಾಗಬೇಕು. ನಾಲ್ಕು ಗೋಡೆಯ ಮಧ್ಯೆದ ಸಾಹಿತ್ಯಕ್ಕಿಂತಲೂ ಸಮಾಜದ ಮುಖ್ಯವಾಹಿನಿಗೆ ಬಂದು ಸಾಹಿತ್ಯ ಬರೆಯಲು ಮಹಿಳೆಯರು ಮುಂದೆ ಬರಬೇಕು ಎಂದು ಜಿಲ್ಲಾ ಮಟ್ಟದ ಮಹಿಳಾ ಸಮ್ಮೇಳನದ ಸರ್ವಾಧ್ಯಕ್ಷೆ ಡಾ.ಶಾರದಾದೇವಿ ಜಾಧವ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ರವಿವಾರ ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ ಜಿಲ್ಲಾ ಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ, ಮಾತನಾಡಿದರು.
ಈ ಭಾಗದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ಪರಿಹರಿಸುವ ಸಾಹಿತ್ಯ ಮಹಿಳಾ ಸಾಹಿತಿಗಳಿಂದ ಮೂಡಿ ಬರಬೇಕಾಗಿದೆ. ಅವರು ರಚಿಸಿದ ಸಾಹಿತ್ಯಕ್ಕೆ ಪ್ರೋತ್ಸಾಹ ಸಿಗಬೇಕು. ಜತೆಗೆ ಸಮ ಸಮಾಜ ಕಟ್ಟಲು ಭಾಷೆ ಸಂಸ್ಕೃತಿ, ನೆಲ-ಜಲಗಳ ಸಾಹಿತ್ಯಬೇಕು ಎಂದರು.
ಬಸವಣ್ಣ, ಅಕ್ಕ ಮಹಾದೇವಿ, ಜ್ಯೋತಿಬಾ ಫುಲೆ, ಡಾ.ಅಂಬೇಡ್ಕರ್ ಅವರ ಹೋರಾಟಗಳ ಪರಿಣಾಮ ಇಂದು ಮಹಿಳೆಯರೆಲ್ಲರೂ ಸಾಂವಿಧಾನಿಕ ಹಕ್ಕುಗಳನ್ನು ಪಡೆದು ಅನುಭವಿಸುತ್ತಿದ್ದೇವೆ. ಜಡತ್ವ ಸಂಸ್ಕೃತಿಯನ್ನು ದಿಕ್ಕರಿಸಿ ಸಮ ಸಮಾಜದ ಕನಸು ಸಾಕಾರಗೊಳಿಸಬೇಕಾಗಿದೆ. ಮಹಿಳೆಯರು ಸಾಮಾಜಿಕ ಕಟ್ಟಳೆ, ಬಂಧನಗಳನ್ನು ಕಳಚಿ ನಾವು ಅಬಲೆಯಲ್ಲ, ಸಬಲೆ ಎಂಬ ಸಂದೇಶ ಸಾರಬೇಕು ಎಂದು ಹೇಳಿದರು.
ಆಶಯ ನುಡಿಗಳನ್ನಾಡಿದ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಹೆಣ್ಣು ಮಗಳು, ಗೆಳತಿ, ತಾಯಿಯಾಗಿ ಅನೇಕ ಪಾತ್ರಗಳನ್ನು ನಿಭಾಯಿಸುತ್ತಾಳೆ, ಇಂದಿಗೂ ಹೆಣ್ಣನ್ನು ಭೋಗದ ವಸ್ತುವನ್ನಾಗಿ ಮಾಡಿಕೊಳ್ಳಲಾಗುತ್ತಿದೆ. ಮಹಿಳೆಯ ಬಗ್ಗೆ ಅನುಕಂಪ ತೋರಿಸುವುದಕ್ಕಿಂತ ಅವಕಾಶ ಕೊಡಬೇಕಾಗಿದೆ. ಮಹಿಳಾ ಸಾಹಿತಿಗಳನ್ನು ಮುಖ್ಯ ವಾಹಿನಿಗೆ ತರುವ ಕಾರ್ಯ ಪರಿಷತ್ತು ಮಾಡುತ್ತಿದೆ ಎಂದರು.
ಸಮ್ಮೇಳನ ಉದ್ಘಾಟಿಸಿದ ಹಿರಿಯ ಸಾಹಿತಿ ಡಾ.ಸರಸ್ವತಿ ಚಿಮ್ಮಲಗಿ ಮಾತನಾಡಿ, ಮಹಿಳಾ ಸಾಹಿತ್ಯ ನಾಲ್ಕು ಗೋಡೆಗಳಿಗೆ ಮಾತ್ರ ಸೀಮಿತವಾಗಬಾರದು. ಅದನ್ನು ಮೀರಿ ಬೆಳೆಯುವ ಸಂವೇದನಾಶೀಲ ಸಾಹಿತ್ಯ ರಚನೆ ಆಗಬೇಕು. ಮಹಿಳೆಯ ಅಭಿವ್ಯಕ್ತ ಸ್ವಾತಂತ್ರ್ಯ ಹಕ್ಕುಗಳು ಪಡೆದು ಶೋಷಣೆ ಮುಕ್ತ ಸಮಾಜ ಕಟ್ಟಲು ಮುಂದಾಗಬೇಕು ಎಂದು ಕರೆ ನೀಡಿದರು.
ಹೆಚ್.ಕೆ.ಇ. ಸಂಸ್ಥೆಯ ಉಪಾಧ್ಯಕ್ಷ ರಾಜು ಬಸವರಾಜ ಭೀಮಳ್ಳಿ, ಸಂತೋಷಿರಾಣಿ ಪಾಟೀಲ ತೆಲ್ಕೂರ, ಕೃಷ್ಣಾಜೀ ಕುಲಕರ್ಣಿ, ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಸೋಮಶೇಖರ ಗೋನಾಯಕ, ಡಾ.ಪ್ರಹ್ಲಾದ ಬುರ್ಲಿ, ಶರಣು ಹೊನ್ನಗೆಜ್ಜೆ, ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಶರಣರಾಜ ಛಪ್ಪರಬಂದಿ, ರಾಜೇಂದ್ರ ಮಾಡಬೂಳ, ಪ್ರಿಯಾಂಕಾ ಪಾಟೀಲ, ಜ್ಯೋತಿ ಕೋಟನೂರ, ಶಿಲ್ಪಾ ಜೋಶಿ, ಶಕುಂತಲಾ ಪಾಟೀಲ ಜಾವಳಿ, ಧರ್ಮರಾಜ ಜವಳಿ ಇತರರು ಉಪಸ್ಥಿತರಿದ್ದರು.
ನಂತರ ನಡೆದ ವರ್ತಮಾನದೊಂದಿಗೆ ಮುಖಾಮುಖಿ ಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಡಾ.ಅಮೃತಾ ಕಟಕೆ ವಹಿಸಿದ್ದರು. ಡಾ.ಸವಿತಾ ಸಿರಾಗೋಜಿ ಆಶಯ ನುಡಿಗಳನ್ನಾಡಿದರು. ಜಿಲ್ಲೆಯ ಮಹಿಳಾ ಸಾಹಿತ್ಯ ಕುರಿತು ಡಾ.ಶೈಲಜಾ ಕೊಪ್ಪರ, ಮಹಿಳಾ ಅಸ್ಮಿತೆ ಕುರಿತು ಡಾ.ಇಂದುಮತಿ ಪಾಟೀಲ, ಸಮ್ಮೇಳನಾಧ್ಯಕ್ಷರ ಬದುಕು ಬರಹದ ಕುರಿತು ಡಾ.ಶಾಮಲಾ ಸ್ವಾಮಿ ಮಾತನಾಡಿದರು. ಸೇವಂತಾ ಚವ್ಹಾಣ, ಆರತಿ ಕಡಗಂಚಿ, ಆರತಿ ಜಮಾದಾರ ವೇದಿಕೆ ಮೇಲಿದ್ದರು.
ಮಹಿಳಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ.ಶ್ರೀಶೈಲ ನಾಗರಾಳ, ಮಹಿಳಾ ಅಸ್ಮಿತೆಯಾಗಿ ಮೂಡಿ ಬಂದ ಈ ಕವಿಗೋಷ್ಠಿ ಮಹತ್ವದ ವಿಚಾರಗಳನ್ನು ಕಾವ್ಯದಲ್ಲಿ ಕಟ್ಟಿಕೊಟ್ಟಿದೆ. ಕಾವ್ಯ ಸಂಕೀರ್ಣವಾದ ಮಾಧ್ಯಮ ಇಂದಿನ ವರ್ತಮಾನದ ತಲ್ಲಣಗಳಿಗೆ ಕಾವ್ಯಗಳು ಮಿಡಿಯಬೇಕು. ಡಾ.ಅಂಬೇಡ್ಕರ್ ರವರು ಬರೆದ ಸಂವಿಧಾನ ಸದಾ ಆಪ್ತವಾಗುತ್ತವೆ. ಕವಚಿಗಳು ತನ್ನೊಳಗಿನ ತುಡಿತ, ಅಭಿವ್ಯಕ್ತತೆ ತುಂಬಾ ನಾಜೂಕಾಗಿ ಅಕ್ಷರಗಳಿಂದ ಕಾವ್ಯ ಕಟ್ಟುವುದಕ್ಕಿಂತ ಬಿತ್ತಬೇಕಾಗಿದೆ ಎಂದರು. ಬದುಕಿನ ಅನುಭವಗಳ ಅಭಿವ್ಯಕ್ತತೆ ಉತ್ತಮ ಶೈಲಿಯಾಗಿರಬೇಕು. ನೋವಿನಿಂದ ಹುಟ್ಟಿರುವ ಕಾವ್ಯ ಬಹು ಬೇಗ ಜನರನ್ನು ತಲುಪುತ್ತದೆ. ಕವಿತೆ ಸದಾ ಕಾಡಬೇಕು. ಆ ಮೂಲಕ ಸಮಾಜ ಪರಿವರ್ತನೆ ಸಾಧ್ಯ ಎಂದರು.
ಉಷಾ ಗೊಬ್ಬೂರ ಆಶಯ ನುಡಿಗಳನ್ನಾಡಿದರು. ವಿದ್ಯಾಸಾಗರ ದೇಶಮುಖ, ರೇಣುಕಾ ಸರಡಗಿ, ಅರ್ಚನಾ ಜೈನ್ ವೇದಿಕೆ ಮೇಲಿದ್ದರು. ಕವಿಗಳಾದ ಡಾ.ರೇಣುಕಾ ಹಾಗರಗುಂಡಗಿ, ಕವಿತಾ ಹಳ್ಳಿ, ಶಿವಲೀಲಾ ಕಲಗುರ್ಕಿ, ಡಾ.ಸಂಗೀತಾ ಹಿರೇಮಠ, ಗಂಗಮ್ಮ ನಾಲವಾರ, ಜಯಶ್ರೀ ಚೌದ್ರಿ, ಸುನಂದಾ ಕಲ್ಲಾ, ವಿಜಯಲಕ್ಷ್ಮೀ ಗುತ್ತೇದಾರ, ಮಂಜುಳಾ ಪಾಟೀಲ, ತ್ರೀವೇಣಿ ಎಸ್.ಕೆ., ಜ್ಯೋತಿ ಲಿಂಗಂಪಲ್ಲಿ, ಜ್ಯೋತಿ ಬೊಮ್ಮಾ, ಶಿವಲೀಲಾ ಧನ್ನಾ ಅವರು ವಾಚಿಸಿರುವ ಕವನಗಳು ಪ್ರೇಕ್ಷಕರ ಗಮನ ಸೆಳೆದವು.
ಸಮಾರೋಪ ನುಡಿಗಳನ್ನಾಡಿದ ರಂಗಾಯಣ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ, ತಮ್ಮ ಶಕ್ತಿ ಸಾಮಥ್ರ್ಯ ಅಭಿವ್ಯಕ್ತಪಡಿಸುವ ವೇದಿಕೆಯಾಗಿರುವ ಸಾಹಿತ್ಯ ಸಮ್ಮೇಳನ ಪ್ರಮುಖವಾಗಿದೆ. ಸಾಂಸರಿಕ ಜೀವನದ ಜತೆಗೆ ಪ್ರವೃತ್ತಿಗಳನ್ನು ಮೈಗೂಡಿಸಿಕೊಂಡಿರುವ ಮಹಿಳೆ ಸಾಧನೆಗಳು ಸದಾ ಪ್ರಸ್ತುತವಾಗಿವೆ ಎಂದರು.
ಹಿರಿಯ ಸಾಹಿತಿ ಡಾ.ನಾಗೇಂದ್ರ ಮಸೂತಿ, ಶಿವಾನಂದ ಖಜೂರಗಿ, ಕಲ್ಯಾಣಕುಮಾರ ಶೀಲವಂತ ಮಾತನಾಡಿದರು.
ಇದೇ ವೇಳೆ ಸಾಹಿತಿಗಳಾದ ಡಾ.ಸಾರಿಕಾದೇವಿ ಕಾಳಗಿ, ಡಾ.ಕಾವ್ಯಶ್ರೀ ಮಹಾಗಾಂವಕರ್, ಭಾಗ್ಯಲತಾ ಶಾಸ್ತ್ರೀ, ಅಚಿಜನಾ ಯಾತನೂರ, ಡಾ.ಪರ್ವಿನ್ ಸುಲ್ತಾನಾ, ಸೀತಾ ಮಲ್ಲಾಬಾದಿ, ಜ್ಯೋತಿ ಮಾರ್ಲ, ಅನುಪಮಾ ಅಪಗೊಂಡ, ಡಾ.ವಿಶಾಲಾಕ್ಷಿ ಕರೆಡ್ಡಿ ಅವರನ್ನು ಸತ್ಕರಿಸಲಾಯಿತು.
ಇದಕ್ಕೂ ಮುನ್ನ ಬೆಳಗ್ಗೆ ನಗರದ ಮುಖ್ಯ ರಸ್ತೆಯ ಮೂಲಕ ಸರದಾರ ವಲ್ಲಭಬಾಯಿ ಪಟೇಲ್ ವೃತ್ತದಿಂದ ಕನ್ನಡ ಭವನ ಅಂಗಳಕ್ಕೆ ತಲುಪಿತು. ಕಲಾ ಪ್ರದರ್ಶನ, ಡೊಳ್ಳು ಕುಣಿತ, ಲಂಬಾಣಿ ನೃತ್ಯ, ಹಲಗೆ ವಾದನ ಹಾಗೂ ಗೆಜ್ಜೆ ನಾದಗಳೊಂದಿಗೆ ಸಾಹಿತಿಗಳು, ಸಂಘಟಕರು ಸೇರಿದಂತೆ ಮತ್ತಿತರರು ಹೆಜ್ಜೆ ಹಾಕಿದರು.