×
Ad

ಕಲಬುರಗಿ | ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ, ಆಡಳಿತಾತ್ಮಕ ನಾಯಕತ್ವ ಕುರಿತು ಕಾರ್ಯಾಗಾರ

Update: 2025-01-20 19:59 IST

ಕಲಬುರಗಿ : ದೊಡ್ಡ ದೊಡ್ಡ ಕಟ್ಟಡಗಳಿಂದ ಕಾಲೇಜು ಸ್ಥಾಪಿಸಿ ಮೂಲಸೌಕರ್ಯ ಒದಗಿಸಿದರೆ ಸಾಲದು. ವಿದೇಶಿ ವಿದ್ಯಾರ್ಥಿಗಳನ್ನು ಆಕರ್ಷಿಸುವಂತಹ ಗುಣಮಟ್ಟದ ಶಿಕ್ಷಣ ನಮ್ಮ ದೇಶಿ ವಿವಿ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು ನೀಡುವ ಅವಶ್ಯಕತೆ ಇದೆ ಎಂದು ಕರ್ನಾಟಕ ಉನ್ನತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷರು ಹಾಗೂ ಗುಲ್ಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎಸ್.ಆರ್.ನಿರಂಜನ್ ಹೇಳಿದರು.

ಸೋಮವಾರ ಗುಲ್ಬರ್ಗಾ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಆಂತರಿಕ ಗುಣಮಟ್ಟ ಭರವಸೆ ಕೋಶವು ಪ್ರಧಾನಮಂತ್ರಿ ಉಚ್ಚತರ್ ಶಿಕ್ಷಾ ಅಭಿಯಾನ ಯೋಜನೆಯಡಿ ವೃತ್ತಿಪರತೆಯ ಬೆಳವಣಿಗೆಗಾಗಿ "ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಮತ್ತು ಆಡಳಿತಾತ್ಮಕ ನಾಯಕತ್ವ" ಕುರಿತು ಆಯೋಜಿಸಿದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಪಡೆದು 7 ದಶಕಗಳು ಸಂದಿವೆ. ಈ ಅವಧಿಯಲ್ಲಿ ದೇಶ ಸ್ಪೇಸ್, ಸ್ಯಾಟಲೈಟ್, ಅಟೋಮಿಕ್ ಎನರ್ಜಿ, ಡ್ರಗ್ಸ್ ಹೀಗೆ ಅನೇಕ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಕಂಡಿದೆ. ಇತ್ತೀಚೆಗೆ ಮಹಾಮಾರಿ ಕೋವಿಡ್ ಸೋಂಕಿಗೆ ಕೋವಿಡ್ಶೀಲ್ಡ್ ಲಸಿಕೆ ಕಂಡುಹಿಡಿದಿದ್ದೇವೆ. 1960ರಲ್ಲಿ ಹಸಿರು ಕ್ರಾಂತಿ ಪರಿಣಾಮ ದೇಶದಲ್ಲಿ ಇಂದು ಆಹಾರದ ಸಮಸ್ಯೆ ಇಲ್ಲ. ಆದರೆ ಶಿಕ್ಷಣ ಮತ್ತು ತಂತ್ರಜ್ಞಾನದಲ್ಲಿ ನಿರೀಕ್ಷಿತ ಪ್ರಗತಿ ಇನ್ನು ಕಂಡಿಲ್ಲ. ಈ ಕ್ಷೇತ್ರದಲ್ಲಿ ಪ್ರಗತಿ ಸಾಧನೆಗೆ ಮುಂದಡಿ ಇಡಬೇಕಿದೆ ಎಂದರು.

ರಾಜ್ಯದಲ್ಲಿ ಉನ್ನತ ಶಿಕ್ಷಣದಲ್ಲಿ ಸುಧಾರಣೆಯ ನಿಟ್ಟಿನಲ್ಲಿ ಯು.ಜಿ.ಸಿ. ನಿರ್ದೇಶನದಂತೆ ಕೌಶಲ್ಯ ಕೊರತೆ ನೀಗಿಸುವ ನಿಟ್ಟಿನಲ್ಲಿ ಪದವಿ ಕಾಲೇಜಿನಲ್ಲಿ ಅಪ್ರೆಂಟಿಸ್ ಎಂಪ್ಲಾಯೇಬಲ್ ಡಿಗ್ರಿ ಪ್ರೋಗ್ರಾಮ್ ಯೋಜನೆ ಜಾರಿಗೊಳಿಸಿದ್ದು, ಇದರಿಂದ ವಿದ್ಯಾರ್ಥಿಗಳು ಕೈಗಾರಿಕೆಯಲ್ಲಿ ಅಪ್ರೆಂಟಿಸ್ ತರಬೇತಿ ಪಡೆಯಲು ಸಹಾಯವಾಗುತ್ತಿದೆ. ರಾಜ್ಯದಲ್ಲಿ ವಿವಿಗಳ ಬಲವರ್ಧನೆಗೆ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಶ್ರಮಿಸುತ್ತಿದ್ದು, ವಿವಿಗಳಲ್ಲಿನ ಅಕಾಡೆಮಿಕ್ ಪುನರ್ ರಚನೆ, ಏಕಮಾತ್ರ ಪದ್ದತಿ ಜಾರಿಗೆ ತರಲಾಗಿದೆ. ಯು.ಯು.ಸಿ.ಎಂ.ಎಸ್. ಜಾರಿಗೆ ತಂದ ನಂತರ ಕೆಲವೊಂದು ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಇದನ್ನು ಬಗೆಹರಿಸಲಾಗುತ್ತಿದೆ ಎಂದು ಪ್ರೊ.ಎಸ್.ಆರ್.ನಿರಂಜನ್ ತಿಳಿಸಿದರು.

ಪಿ.ಎಂ.-ಉಷಾ ಯೋಜನೆಯಡಿ ರಾಜ್ಯಕ್ಕೆ 413.96 ಕೋಟಿ ರೂ :

ಪ್ರಧಾನಮಂತ್ರಿ ಉಚ್ಛತರ್ ಶಿಕ್ಷಾ ಅಭಿಯಾನ ಯೋಜನೆಯಡಿ ರಾಜ್ಯದಲ್ಲಿನ ವಿವಿ ಬಲವರ್ಧನೆಗೆ ಒಟ್ಟಾರೆ 413.96 ಕೋಟಿ ರೂ. ಕೇಂದ್ರ ಸರಕಾರ ಮಂಜೂರು ಮಾಡಿದೆ. ಇದರಲ್ಲಿ ಗುಲ್ಬರ್ಗಾ ವಿವಿಗೆ 20 ಕೋಟಿ ರೂ. ಲಭಿಸಲಿದ್ದು, ಇದರ ಸದ್ಬಳಕೆ ಮಾಡಿಕೊಂಡು ಗುಣಮಟ್ಟ ಶಿಕ್ಷಣ ನೀಡುವತ್ತ ವಿವಿ ಮುಂದಾಗಬೇಕು. ಗುಲ್ಬರ್ಗಾ ವಿವಿ ಸೇರಿದಂತೆ ರಾಜ್ಯದಲ್ಲಿನ ವಿವಿಯಲ್ಲಿನ ಉಪನ್ಯಾಸಕರ ಕೊರತೆ ನೀಗಿಸುವ ನಿಟ್ಟಿನಲ್ಲಿ ಈಗಾಗಲೆ ಮುಖ್ಯಮಂತ್ರಿಗಳು ಹಂತ-ಹಂತವಾಗಿ ಪ್ರಾಧ್ಯಾಪಕರನ್ನು ಭರ್ತಿ ಮಾಡಲು ಸಮ್ಮತ್ತಿಸಿದ್ದು, ಮುಂದಿನ ದಿನದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದರು.

2035ಕ್ಕೆ ಶೇ.50 ಎನ್ರೋಲಮೆಂಟ್ ಗುರಿ :

ದೇಶದಲ್ಲಿ 1,284 ವಿಶ್ವವಿದ್ಯಾಲಯಗಳು, 56 ಕೇಂದ್ರಿಯ ವಿಶ್ವವಿದ್ಯಾಲಯಗಳು, 58,000 ಕಾಲೇಜು, 149 ಉನ್ನತ ಶಿಕ್ಷಣ ಸಂಸ್ಥೆಗಳು ಇದ್ದರೂ ದೇಶದಲ್ಲಿ ಉನ್ನತ ಶಿಕ್ಷಣ ಪ್ರವೇಶ ಪಡೆಯುತ್ತಿರುವವರ ಸಂಖ್ಯೆ ಶೇ.28.40 ಇದ್ದರೆ ರಾಜ್ಯದ ಪ್ರಮಾಣ ಶೇ.36.20 ಇದೆ. ಒಟ್ಟಾರೆ ದೇಶದಲ್ಲಿ 43.3 ಮಿಲಯನ್ ವಿದ್ಯಾರ್ಥಿಗಳು ಮಾತ್ರ ಉನ್ನತ ಶಿಕ್ಷಣ ಪಡೆಯಲು ಸಹಾಯವಾಗುತ್ತಿದೆ. ಮುಂದಿನ 2035ಕ್ಕೆ ಇದರ ಪ್ರಮಾಣ ಶೇ.50ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಪ್ರೊ ಎಸ್.ಆರ್.ನಿರಂಜನ್ ತಿಳಿಸಿದರು.

ಉದ್ಯೋಗಾಧಾರಿತ ಕೌಶಲ್ಯ ನೀಡುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಕಲಿಕೆ ಜೊತೆ ಕೌಶಲ್ಯ ನೀಡುತ್ತಿದೆ. ಕಳೆದ 2023-24ನೇ ಸಾಲಿಗೆ 5 ವಿವಿ, 89 ಪ್ರಥಮ ದರ್ಜೆ ಕಾಲೇಜು ಮೂಲಕ 29,000 ವಿದ್ಯಾರ್ಥಿಗಳು ಮತ್ತು ಪ್ರಸಕ್ತ 2024-25ನೇ ಸಾಲಿಗೆ 7 ವಿವಿ ಮತ್ತು 169 ಪ್ರಥಮ ದರ್ಜೆ ಕಾಲೇಜುಗಳು ಮೂಲಕ 53,840 ವಿದ್ಯಾರ್ಥಿಗಳು ಕೌಶಲ್ಯ ಶಿಕ್ಷಣ ಪಡೆಯುತ್ತಿದ್ದಾರೆ. ಈ ಯೋಜನೆಯಡಿ ಕೈಗಾರಿಕೆಗಳಿಂದಲೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ, ಅವರೇ ಪರೀಕ್ಷಿಸಿ ಪ್ರಮಾಣ ಪತ್ರ ನೀಡುತ್ತಾರೆ. ಇದರಿಂದ ಮಾರುಕಟ್ಟೆಯಲ್ಲಿನ ಬೇಡಿಕೆ ಅನುಗುಣವಾಗಿ ವಿದ್ಯಾರ್ಥಿಗಳು ಕೌಶಲ್ಯದ ಶಿಕ್ಷಣ ಪಡೆಯಲು ಸಹಾಯವಾಗುತ್ತದೆ ಎಂದರು.

ಉನ್ನತ ಶಿಕ್ಷಣಕ್ಕೆ 5 ವಿದ್ಯಾರ್ಥಿನಿಯರು ಹೊರದೇಶಕ್ಕೆ :

ಮಹಿಳಾ ಸಬಲೀಕರಣ ನಿಟ್ಟಿನಲ್ಲಿ ಈ ವರ್ಷದಿಂದ ಪ್ರತಿ ವರ್ಷ 5 ವಿದ್ಯಾರ್ಥಿನಿಯರನ್ನು ಇಂಗ್ಲೆಂಡ್ ಗೆ ಉನ್ನತ ಶಿಕ್ಷಣಕ್ಕೆ ಕಳುಹಿಸಲು ಸರಕಾರ ನಿರ್ಧರಿಸಿದ್ದು, ಈ ಸಂಬಂಧ ಬ್ರಿಟಿಷ್ ಕೌನ್ಸಿಲ್ ಆಫ್ ಇಂಡಿಯಾ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ್ ಅವರು ಮಾತನಾಡಿ, ಗುಲ್ಬರ್ಗಾ ವಿವಿ ಇಂಡಸ್ಟ್ರಿ-ಇನ್ಸಿಟಿಟ್ಯೂಟ್ ಮೂಲಕ ಇಂಡಿವಿಜುವಲ್ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಪದವಿ, ಪುಸ್ತಕ ಪ್ರಕಟಿಸಿದರೆ ಸಾಲದು. ಮಾನವ ಜನಾಂಗದ ಒಳಿತಿಗೆ, ವಿದ್ಯಾರ್ಥಿಗಳ ಭವಿಷ್ಯ ಸುಭದ್ರಗೊಳಿಸುವ ನವೀನ, ಕ್ರಿಯಾತ್ಮಕ ಕಾರ್ಯಕ್ರಮಗಳಿಗೆ ಬೋಧಕ ವೃಂದ ಆದ್ಯತೆ ನೀಡಬೇಕು. ಸಾಂಪ್ರದಾಯಿಕ ಹೊರತಾಗಿ ಸದಾ ಹೊಸತನ ಮೈಗೂಡಿಸಿಕೊಂಡಲ್ಲಿ ಮಾತ್ರ ಜಾಗತೀಕವಾಗಿ ವಿವಿ ಗುರುತಿಸಿಕೊಳ್ಳಲು ಸಾಧ್ಯ ಎಂದ ಅವರು, ಪಿ.ಎಂ. ಉಷಾ ನಡಿ ಬಂದ ಅನುದಾನ ಸಲಕರಣೆಗಳ ಖರೀದಿ, ನವೀನ ಸಂಶೋಧನೆಗೆ ಮತ್ತು ಮೂಲಸೌಕರ್ಯಕ್ಕೆ ಬಳಸಿಕೊಳ್ಳಲಾಗುವುದು. ಸಾರ್ವಜನಿಕ ವಿವಿ ಗಳ ಬೆಳವಣಿಗೆ ನಿಟ್ಟಿನಲ್ಲಿ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಕಾರ್ಯಾಗಾರದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ, ಹೈದ್ರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಪ್ರೊ.ರಾಜಶೇಖರ್ ಬೆಲ್ಲಮ್ಕೊಂಡ, ಪುಣೆಯ ಜನ ಸೇವಾ ಫೌಂಡೇಷನ್ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಬಿ.ಟಿ.ಲಾವಣಿ, ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಡಾ. ಶ್ರದೇವಿ ಕಟ್ಟಿಮನಿ, ವಿದ್ಯಾ ವಿಷಯಕ ಪರಿಷತ್ ಸದಸ್ಯ ಪ್ರೊ.ಕೆ.ಸಿದ್ದಪ್ಪ, ಐ.ಕ್ಯೂ.ಎ.ಸಿ ನಿರ್ದೇಶಕ ಪ್ರೊ.ಬಿ.ಆರ್.ಕೆರೂರು ಸೇರಿದಂತೆ ವಿ.ವಿ. ಸಿಂಡಿಕೇಟ್, ವಿದ್ಯಾ ವಿಷಯಕ್ ಪರಿಷತ್ ಸದಸ್ಯರು ಹಾಗೂ ವಿ.ವಿ. ಪ್ರಾಧ್ಯಾಪಕ ವೃಂದ, ಕಾಲೇಜು ಪ್ರಾಚಾರ್ಯರು, ವಿದ್ಯಾರ್ಥಿಗಳಿದ್ದರು.

ಗುಲ್ಬರ್ಗಾ ವಿ.ವಿ. ಕುಲಸಚಿವ ಪ್ರೊ.ರಮೇಶ ಲಂಡನಕರ್ ಸ್ವಾಗತಿಸಿದರು. ಪಿ.ಎಂ-ಉಷಾ ಕಾರ್ಯಕ್ರಮದ ನೋಡಲ್ ಅಧಿಕಾರಿ ಪ್ರೊ.ವಿ.ಎಂ.ಜಾಲಿ ಪ್ರಸ್ತಾವಿಕವಾಗಿ ಮಾತನಾಡಿ ಕಾರ್ಯಗಾರದ ಉದ್ದೇಶ ವಿವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News