ಕಲಬುರಗಿ | ಡೆಂಗ್ಯೂ, ಚಿಕನ್ ಗುನ್ಯಾ ಪಾಸಿಟಿವ್ ಪ್ರಮಾಣ ಶೇ.6.48ಕ್ಕೆ ಇಳಿಕೆ : ಡಿಸಿ ಫೌಝಿಯಾ ತರನ್ನುಮ್
ಕಲಬುರಗಿ: ಕಳೆದ ವರ್ಷ ಜಿಲ್ಲೆಯಾದ್ಯಂತ ಡೆಂಗ್ಯೂ ಹಾವಳಿ ಹೆಚ್ಚಾಗಿದ್ದರಿಂದ ಈ ವರ್ಷ ಮರುಕಳಿಸದಂತೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರಿಂದ ಡೆಂಗ್ಯೂ, ಚಿಕನ್‌ಗುನ್ಯಾ ತಕ್ಕ ಮಟ್ಟಿಗೆ ಹತೋಟಿಗೆ ಬಂದಿದ್ದು, ಕಳೆದ ವರ್ಷಕ್ಕೆ (2024ರಲ್ಲಿ ಪಾಸಿಟಿವಿಡಿ ಪ್ರಮಾಣ 9.6 ) ಹೋಲಿಸಿದರೆ ಈ ವರ್ಷ ಶೇ.6.48ಕ್ಕೆ ಇಳಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಜಿಲ್ಲಾಧಿಕಾರಿಗಳು, ಕಳೆದ ವರ್ಷಕ್ಕೆ ಹೋಲಿಸಿದರೆ ಕಲಬುರಗಿ ಜಿಲ್ಲೆಯಲ್ಲಿ ಪ್ರಸ್ತುತ 2025ನೇ ಕ್ಯಾಲೆಂಡರ್ ವರ್ಷದಲ್ಲಿ ಹೆಚ್ಚಿನ ಸ್ಯಾಂಪಲ್ ಪರೀಕ್ಷೆಗೆ ಒಳಪಡಿಸಿದ್ದಾಗಿಯೂ ಡೆಂಗ್ಯೂ ಪಾಸಿಟಿವ್ ಪ್ರಮಾಣದಲ್ಲಿ ಶೇ. 6.48 ಇಳಿಕೆ ಕಂಡಿರುವುದು ಸಮಾಧಾನದ ವಿಷಯವಾಗಿದೆ ಎಂದಿದ್ದಾರೆ.
2024ನೇ ಕ್ಯಾಲೆಂಡರ್ ವರ್ಷದಲ್ಲಿ ಜಿಲ್ಲೆಯಾದ್ಯಂತ ಆಸ್ಪತ್ರೆಗಳಲ್ಲಿ ಸಂಗ್ರಹಿಸಿದ 12,190 ಡೆಂಗ್ಯೂ ರಕ್ತ ಲೇಪನಗಳಲ್ಲಿ 1,201 ಮತ್ತು 3,043 ಚಿಕುನ್ ಗುನ್ಯಾ ರಕ್ತ ಲೇಪನಗಳಲ್ಲಿ 295 ಪಾಸಿಟಿವ್ ಕಂಡುಬಂದಿತ್ತು. ಪ್ರಸಕ್ತ ಜನವರಿ-2025 ರಿಂದ ಇಲ್ಲಿಯವರೆಗೆ 7,584 ರಕ್ತದ ಮಾದರಿಗಳಲ್ಲಿ 492 ಖಚಿತ ಡೆಂಗ್ಯೂ ಪ್ರಕರಣಗಳು ಹಾಗೂ 1,749 ರಕ್ತದ ಮಾದರಿಗಳಲ್ಲಿ 41 ಖಚಿತ ಚಿಕನ್‌ಗುನ್ಯಾ ಪ್ರಕರಣಗಳು ವರದಿಯಾಗಿವೆ. 2024 ರಲ್ಲಿದ್ದ ಶೇ.9.6 ಪಾಸಿಟಿವಿಟಿ ರೇಟ್ 2025 ರಲ್ಲಿ ಶೇ. 6.48ಕ್ಕೆ ಇಳಿದಿದೆ ಎಂದು ಅಂಕಿ-ಸಂಖ್ಯೆ ಸಮೇತ ಡಿ.ಸಿ. ಮಾಹಿತಿ ನೀಡಿದ್ದಾರೆ.
ಇಷ್ಟಾಗಿಯೂ ಕಲಬುರಗಿ ನಗರ ಸೇರಿ ಜಿಲ್ಲೆಯಾದ್ಯಂತ ಡೆಂಗ್ಯೂ ಮತ್ತು ಚಿಕನ್ ಗುನ್ಯಾ ಸಂಪೂರ್ಣವಾಗಿ ನಿಯಂತ್ರಣ ಸಾಧಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ಅಗತ್ಯ ಮುಂಜಾಗ್ರತೆ ಕ್ರಮ ತೆಗೆದುಕೊಂಡಿದ್ದು, ವಿಶೇಷವಾಗಿ ಕಲಬುರಗಿ ನಗರದಲ್ಲಿ ಈಡಿಸ್ ಸೊಳ್ಳೆಗಳ ನಿರ್ಮೂಲನೆಗೆ ಲಾರ್ವಾ ಸಮೀಕ್ಷೆ ತೀವ್ರಗೊಳಿಸಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಸ್ತುತ 2025ನೇ ಕ್ಯಾಲೆಂಡರ್ ವರ್ಷದಲ್ಲಿ ಕಲಬುರಗಿ ನಗರದಲ್ಲಿ ಅಲ್ಲಲ್ಲಿ ಡೆಂಗ್ಯೂ ಪ್ರಕರಣ ಪತ್ತೆಯಾಗಿವೆಯಾದರು ಜನವರಿ ಮಾಹೆಯಿಂದ ಇಲ್ಲಿಯವರೆಗೆ ಯಾವುದೇ ಡೆಂಗ್ಯೂ ಖಚಿತ ಪ್ರಕರಣಗಳಿಂದ ಸಾವು ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿರುವ ಜಿಲ್ಲಾಧಿಕಾರಿಗಳು, ಡೆಂಗ್ಯೂ ಪತ್ತೆಯಾದ ಪ್ರದೇಶಗಳಲ್ಲಿ ನಿಯಮಿತವಾಗಿ ಆಶಾ ಕಾರ್ಯಕರ್ತೆಯರು ಈಡೀಸ್ ಸೊಳ್ಳೆಗಳ ನಿರ್ಮೂಲನೆಗೆ ಲಾರ್ವಾ ಸಮೀಕ್ಷೆ ಕೈಗೊಂಡು ಇದರ ಹತೋಟಿಗೆ ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ ಎಂದಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಡೆಂಗ್ಯೂ ಕಿಟ್ ಮೂಲಕ ಪರೀಕ್ಷಿಸಿದ ನಂತರ ಸಂಶಯಾಸ್ಪದ ಚಿಕನ್‌ಗುನ್ಯಾ, ಡೆಂಗ್ಯೂ ಪಾಸಿಟಿವ್ ಬಂದಲ್ಲಿ ರೋಗಿಯ ಇನ್ನೊಂದು ಸ್ಯಾಂಪಲ್ ಪಡೆದು ಅದನ್ನು ಜಿಲ್ಲೆಯ ಡಿ.ಪಿ.ಎಚ್.ಎಲ್ ಮತ್ತು ವಿ.ಆರ್.ಡಿ.ಎಲ್ ಲ್ಯಾಬ್ ಗಳಿಗೆ ಕಳುಹಿಸಿ ಪರೀಕ್ಷಿಸಿ ಖಚಿತಪಡಿಸಿಕೊಳ್ಳಬೇಕೆಂದು ಆಸ್ಪತ್ರೆಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಡಿ.ಸಿ. ಬಿ.ಫೌಝಿಯಾ ತರನ್ನುಮ್ ತಿಳಿಸಿದ್ದಾರೆ.
ಡೆಂಗ್ಯೂ, ಚಿಕನ್ ಗುನ್ಯಾ ಪ್ರಕರಣದಲ್ಲಿ ಅನಗತ್ಯ ಭಯ ಪಡುವ ಅವಶ್ಯತೆ ಇಲ್ಲ. ಸಾರ್ವಜನಿಕರು ಸ್ವಚ್ಛತೆ, ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಮನೆ ಸುತ್ತಮುತ್ತ ನೀರು ಶೇಖರಣೆಯಾಗದಂತೆ ನೋಡಿಕೊಳ್ಳಬೇಕು. ಈಡಿಸ್ ಸೊಳ್ಳೆ ಉತ್ಪತ್ತಿ ಸ್ಥಾನ ಸಂಪೂರ್ಣವಾಗಿ ನಿರ್ಮೂಲನೆಗೊಳಿಸಬೇಕು. 20,000 ಪ್ಲೇಟ್ ಲೆಟ್‌ಗಳು ಇರುವವರೆಗೂ ಭಯ ಪಡಬೇಕಿಲ್ಲ ಎಂದಿರುವ ಜಿಲ್ಲಾಧಿಕಾರಿಗಳು, ಈ ಜ್ವರವು ಸಾಮಾನ್ಯ ಒಂದು ವೈರಸ್ ನಿಂದ ಬರುತ್ತಿದ್ದು, ಇಂತಹ ಜ್ವರ ಪ್ರಕರಣಗಳಲ್ಲಿ ಪ್ಯಾರಾಸಿಟಾಮೋಲ್ ಮಾತ್ರೆಗಳನ್ನು ನೀಡುವುದರ ಮೂಲಕ ಶೇ.90ರಷ್ಟು ರೋಗಿಗಳು ಪ್ರಾಥಮಿಕ ಚಿಕಿತ್ಸೆಯಿಂದಲೇ ಗುಣಮುಖಪಡಿಸಬಹುದಾಗಿದೆ ಎಂದಿದ್ದಾರೆ.
ಡೆಂಗ್ಯೂ, ಚಿಕನ್ ಗುನ್ಯಾ ಲಕ್ಷಣ ಕಂಡುಬಂದಲ್ಲಿ ಕೂಡಲೆ ವೈದ್ಯರನ್ನು ಕಾಣಬೇಕು. ಡೆಂಗ್ಯೂ ರೋಗಿಗಳ ಚಿಕಿತ್ಸೆಗಾಗಿ ಮುಂಜಾಗ್ರತೆ ಕ್ರಮವಾಗಿ ಜಿಲ್ಲೆಯಾದ್ಯಂತ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಲಾ 2, ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಲಾ 5, ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ 10, ಜಿಮ್ಸ್ ಮತ್ತು ಇ.ಎಸ್.ಐ.ಸಿ ಆಸ್ಪತ್ರೆಗಳಲ್ಲಿ ತಲಾ 20 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಶೇ.5 ರಿಂದ 10 ರಷ್ಟು ರೋಗಿಗಳು ಮಾತ್ರ ಕ್ಲಿಷ್ಟಕರ ಸಂದರ್ಭಗಳಿಗೆ ಒಳಗಾಗುವಸಂಭವ ಇರುತ್ತದೆ. ಇಂತಹ ರೋಗಿಗಳಿಗೆ ವಿಶೇಷ ಆರೈಕೆಗೆಂದೆ ಜಿಲ್ಲಾ ಆಸ್ಪತ್ರೆಯಲ್ಲಿ ಒಂದು ವಿಶೇಷ ವಾರ್ಡ್ ಸ್ಥಾಪಿಸಿದೆ.