ಕಲಬುರಗಿ | ಒತ್ತಡ ನಿಯಂತ್ರಣಕ್ಕೆ ಯೋಗವೇ ಮದ್ದು: ಮಾಜಿ ಶಾಸಕ ಸುಭಾಷ್ ಗುತ್ತೇದಾರ
ಕಲಬುರಗಿ: ಯೋಗವು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಸಮತೋಲನವನ್ನು ತರಲು ಸಹಾಯಕವಾಗುತ್ತದೆ. ಅಲ್ಲದೇ ವೈಜ್ಞಾನಿಕ ಅಧ್ಯಯನಗಳೂ ಸಹ ಯೋಗದ ಪ್ರಭಾವವನ್ನು ಮಾನ್ಯ ಮಾಡಿವೆ ಎಂದು ಆಳಂದ ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ ಅಭಿಪ್ರಾಯಪಟ್ಟರು.
ಆಳಂದ ಪಟ್ಟಣದ ಎಸ್‌ಆರ್‌ಜಿ ಫೌಂಡೇಶನ್ ಅಡಿಯಲ್ಲಿ ನಡೆಯುತ್ತಿರುವ ಎಸ್‌ಆರ್‌ಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ಹೊಣೆಗಾರಿಕೆ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಜೀವನದಲ್ಲಿ ಪ್ರತಿದಿನ ಯೋಗ ಅಭ್ಯಾಸ ಮಾಡುವುದರಿಂದ ರೋಗಮುಕ್ತ ಜೀವನ ನಡೆಸಬಹುದಾಗಿದೆ. ಯೋಗ ಮೂಲತಃ ಅತ್ಯಂತ ಪ್ರಾಚೀನ ಕಲೆ ಇದು ಆರೋಗ್ಯಕರ ದೇಹದೊಳಗೆ ಆರೋಗ್ಯಕರ ಮನಸ್ಸನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಯೋಗ ಮಾನವ ದೇಹದ ದೈಹಿಕ, ಆಧ್ಯಾತ್ಮಿಕ ಮತ್ತು ಮಾನಸಿಕ ಸ್ಥಿತಿಯನ್ನು ಹೆಚ್ಚಿಸುತ್ತದೆ. ಯೋಗ ಎನ್ನುವ ಪದ ಸಂಸ್ಕೃತದ ಮೂಲಧಾತುವಾದ “ಯುಜ್” ನಿಂದ ಬಂದಿದ್ದು. ಇದು ಕೂಡಿಸು, ಕೇಂದ್ರಿಕರಿಸು ಎನ್ನುವ ಅರ್ಥವನ್ನು ನೀಡುತ್ತದೆ. ಇಂತಹ ಅಮೂಲ್ಯ ಸಂಪತ್ತನ್ನು ಇಡೀ ಜಗತ್ತಿಗೆ ಪರಿಚಯಿಸಿದವರು ಪತಂಜಲಿ ಮಹರ್ಷಿ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿ ರಂಗಸ್ವಾಮಿ ಶೆಟ್ಟಿ ಮಾತನಾಡಿ, ಚಂಚಲವಾದ ಮನಸ್ಸು ಏಕಾಗ್ರತೆ ತರಲು ಯೋಗದ ಮೊದಲು ಪ್ರಾರ್ಥನೆ ಮಾಡಿ ನಂತರ ದೇಹದ ಅಂಗಾಂಗಗಳು ಸಡಿಲಗೊಳ್ಳಲು ಶಿಥಿಲೀಕರಣ ವ್ಯಾಯಾಮವನ್ನು ಮಾಡಬೇಕು. ಇದು ದೇಹಕ್ಕೆ ಆರಾಮ ನೀಡುವುದರ ಜೊತೆಗೆ ಗಂಟುನೋವು ಮತ್ತು ಗಂಟುಗಳಲ್ಲಿ ಬರುವ ಶಬ್ದಗಳನ್ನು ನಿವಾರಿಸಲು ನೆರವಾಗುತ್ತದೆ ಎಂದರು.
ಯೋಗ ತರಬೇತುದಾರ ಮಾಜಿ ಯೋಧರ ಅಧಿನಸ್ಥ ಅಧಿಕಾರಿ ಗುರುಭೀಮರಾಯ ಕವಲಗಾ ಯೋಗ ಮತ್ತು ಪ್ರಾಣಾಯಾಮದ ಮಹತ್ವ ಬಗ್ಗೆ ತಿಳಿ ಹೇಳಿ ಶಾಲೆಯ ಸುಮಾರು 600 ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕರಿಗೆ ಯೋಗ ಪ್ರಸ್ತುತ ಪಡಿಸಿದರು.
ವೇದಿಕೆಯ ಮೇಲೆ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಅರವಿಂದ ಭಾಸಗಿ, ವಿಷಯ ಪರಿವೀಕ್ಷಕ ಪಂಕಜ ಪಾಟೀಲ, ಶಾಲೆಯ ಪ್ರಾಚಾರ್ಯೆ ಜ್ಯೋತಿ ವಿಶಾಖ ಸೇರಿದಂತೆ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು.