ಕಲಬುರಗಿ | ಭೀಮಾ ನದಿಯಲ್ಲಿ ಯುವತಿಯ ಮೃತದೇಹ ಪತ್ತೆ: ಕೊಲೆ ಆರೋಪ
Update: 2025-02-20 14:49 IST
ಕಲಬುರಗಿ: ಹೊಲಕ್ಕೆ ತೆರಳಿದ್ದ ಯುವತಿಯ ಮೃತದೇಹ ಭೀಮಾ ನದಿಯಲ್ಲಿ ಪತ್ತೆಯಾಗಿದ್ದು, ಮೃತರ ತಾಯಿ ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಬಣಮಿ ಗ್ರಾಮದ ಲಕ್ಷ್ಮೀ (19) ಮೃತಪಟ್ಟ ಯುವತಿ. ಇತ್ತೀಚೆಗೆ ವಿವಾಹಿತರಾಗಿದ್ದ ಲಕ್ಷ್ಮೀ ಫೆ.14ಕ್ಕೆ ಹೊಲಕ್ಕೆ ಹೋಗಿದ್ದವರು ನಾಪತ್ತೆಯಾಗಿರುವುದಾಗಿ ಅವರ ತಾಯಿ ಜೇವರ್ಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಮಧ್ಯೆ ಫೆ.16ರಂದು ಹೊಲದ ಹತ್ತಿರದ ಭೀಮಾ ನದಿಯಲ್ಲಿ ಲಕ್ಷ್ಮೀಯ ಮೃತದೇಹ ಪತ್ತೆಯಾಗಿದೆ. ತನ್ನ ಮಗಳನ್ನು ಕೊಲೆಗೈಯಲಾಗಿದೆ ಎಂದು ಲಕ್ಷ್ಮೀ ತಾಯಿ ಆರೋಪಿಸಿದ್ದಾರೆ.
ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.