×
Ad

ಕಲಬುರಗಿ| ಶಹಾಬಾದ್‌ ನಗರದಲ್ಲಿ ಮಂಜು ಮುಸುಕಿದ ವಾತಾವರಣ : ಕಣ್ತುಂಬಿಕೊಂಡ ಪ್ರಕೃತಿ ಪ್ರಿಯರು

Update: 2025-11-28 21:54 IST

ಕಲಬುರಗಿ: ವಿಶ್ವದ ಭೂಪಟದಲ್ಲಿಯೇ ಫರ್ಸಿಯ ನಾಡು, ಕಲ್ಲಿನ ಗಣಿ ಹಾಗೂ ಸಿಮೆಂಟ್‌ ಉಧ್ಯಮಗಳ ಮೂಲಕ ತನ್ನ ಛಾಪು ಮೂಡಿಸಿರುವ ಶಹಾಬಾದ್‌ ನಗರದಲ್ಲಿ ಶುಕ್ರವಾರ ಬೆಳಿಗ್ಗೆ ಮಂಜು ದಟ್ಟವಾಗಿ ಆವರಿಸಿ  ನೋಡುಗರಿಗೆ ಆಶ್ಚರ್ಯ ಉಂಟಾದರೆ, ಪ್ರಕೃತಿ ಪ್ರಿಯರಿಗೆ ರಸದೌತಣ ನೀಡಿದಂತಾಯಿತು.

ಶಹಾಬಾದ್ ನಗರದಲ್ಲಿ ಬೆಳಿಗ್ಗೆ 5.30 ರಿಂದ 8ರವರೆಗೆ ಯಾವುದೇ ದಿಕ್ಕಿಗೂ ಕಣ್ಣು ಹಾಯಿಸಿದರೂ ಮಂಜು ಮುಸುಕಿದ ವಾತಾವರಣದಿಂದ ಎಲ್ಲಿಲ್ಲದ ಅಚ್ಚರಿ ಉಂಟಾಯಿತು. ವಾಯು ವಿಹಾರಕ್ಕೆ ಹೊರಟ ಜನರಿಗೆ ಪಕ್ಕದ ಮನೆ, ರಸ್ತೆಯಲ್ಲಿ ಹೋಗುವ ಜನರು, ಎಲ್ಲವೂ ಅಸ್ಪಷ್ಟವಾಗಿ, ಅದೃಶ್ಯವಾಗಿ ಕಾಣುತ್ತಿದ್ದನ್ನು ಕಂಡು ರೋಮಾಂಚನವಾಯಿತು.

ವಾಯುವಿಹಾರಕ್ಕೆ ಹೊರಟ ಜನರು ತಮ್ಮ ಕ್ಯಾಮೆರಾದಿಂದ ಈ ಭಾಗದಲ್ಲಿ ಮೂಡುವ ಅಪರೂಪದ ಕ್ಷಣದ ದೃಶ್ಯಗಳನ್ನು ಸೆರೆಹಿಡಿಯುವಲ್ಲಿ ಮುಂದಾಗಿದ್ದರು. ಈ ರೀತಿಯ ವಾತಾವರಣದಿಂದ ವಾಹನ ಸವಾರರು ಹಗಲಿನಲ್ಲಿಯೇ ವಾಹನದ ದೀಪಗಳನ್ನು ಹೊತ್ತಿಸಿಕೊಂಡೇ ಹೋಗುವಂತಹ ಪರಿಸ್ಥಿತಿ ಉಂಟಾಯಿತು.

ಸುಣ್ಣದ ಅಂಶವನ್ನು ಹೊಂದಿರುವ ಇಲ್ಲಿನ ಭೂಮಿ ಬೇಸಿಗೆಯಲ್ಲಿ ಶಾಖದಿಂದ ಇನ್ನಷ್ಟು ಸೆಕೆಯನ್ನು ಉತ್ಪತ್ತಿ ಮಾಡಿದರೆ, ಮಳೆಗಾಲದಲ್ಲಿ ಸ್ವಲ್ಪ ಮಳೆಯಾದರೆ ಭಾಣಲೆ ಮೇಲೆ ನೀರು ಹಾಕಿದಂತಾಗುತ್ತದೆ. ಬಿಸಿಲ ನಾಡೆಂದೆ ಪ್ರಖ್ಯಾತಿ ಪಡೆದ ಈ ಭಾಗದಲ್ಲಿ ಇಂತಹ ರೋಚಕ ಕ್ಷಣಗಳು ಕಾಣುವುದೇ ಅಸಾಧ್ಯ ಎಂದು ತಿಳಿದುಕೊಂಡವರಿಗೆ ಪ್ರಕೃತಿ ಬದಲಾವಣೆಯ ಪಾಠ ಕಲಿಸಿದೆ. ಅಲ್ಲದೇ ಈ ಭಾಗದಲ್ಲಿ ಈ ರೀತಿಯ ಮಂಜು ಮುಸುಕಿದ ವಾತಾವರಣ ನೋಡಿದ್ದು ಇದೇ ಮೊದಲು ಎಂದು  ಶಿಕ್ಷಕ ರಮೇಶ ಜೋಗದನಕರ್ ಹೇಳುತ್ತಾರೆ.  

ರಾಜ್ಯದ ಮಡಿಕೇರಿ, ಶೃಂಗೇರಿ, ಆಗುಂಬೆ, ಚಾರ್ಮುಡಿ ಘಾಟ್‌ಗಳಲ್ಲಿ  ಮಂಜು ಮುಸುಕಿದ ವಾತಾವರಣ ಸರ್ವೆ ಸಾಮನ್ಯವಾಗಿ ಕಂಡು ಬರುತ್ತದೆ. ಇಂತಹ ಅಪರೂಪದ ಕ್ಷಣ ನಗರದಲ್ಲಿ ಸೃಷ್ಠಿಯಾಗಿ ಕೆಲ ಸಮಯದವರೆಗೆ ಕಣ್ಣನ್ನು ಮಿಟುಕಿಸದೇ ಪ್ರಕೃತಿ ಸೊಬಗನ್ನು ಜನರು ಆಸ್ವಾದಿಸಿದರು. ಈ ಮಂಜು ಮುಸುಕಿದ ವಾತಾವರಣದಿಂದ ವಾಹನ ಚಲಾಯಿಸಲು ಸಾರ್ವಜನಿಕರಿಗೆ ತೊಂದರೆಯಾಗಿದೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News