×
Ad

ಕಾಳಗಿ | ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕಲಿಕಾ ಹಬ್ಬ ಪೂರಕ: ಮಹಾಂತೇಶ ಪಂಚಾಳ

Update: 2026-01-09 20:08 IST

ಕಾಳಗಿ : ಕಲಿಕಾ ಹಬ್ಬವು ಮಕ್ಕಳಲ್ಲಿ ಸಂತಸದ ಕಲಿಕೆಯ ಜೊತೆಗೆ, ಅವರ ಶೈಕ್ಷಣಿಕ ಪ್ರಗತಿಗೆ ಪೂರಕವಾದ ವಾತಾವರಣ ನಿರ್ಮಿಸುತ್ತದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕಾಧ್ಯಕ್ಷ ಮಹಾಂತೇಶ ಪಂಚಾಳ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಹುಲಸಗೂಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಟಕಲ್ ಕ್ಲಸ್ಟರ್ ವ್ಯಾಪ್ತಿಯ ಶಾಲಾ ಮಕ್ಕಳ 'ಎಫ್.ಎಲ್.ಎನ್. ಕಲಿಕಾ ಹಬ್ಬ 2025-26' ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ ಅವರಲ್ಲಿ ಕಲಿಕಾ ಸ್ಫೂರ್ತಿ ಹೆಚ್ಚುತ್ತದೆ. ಇಂತಹ ಹಬ್ಬಗಳು ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರೇರಣೆ ನೀಡುತ್ತವೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಕಾರ್ಯದರ್ಶಿ ಸಂತೋಷ ಕಲಮೂಡ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣದ ಗುಣಮಟ್ಟ ವೃದ್ಧಿಸಲು ಸರ್ಕಾರ ಇಂತಹ ಸೃಜನಶೀಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಮಕ್ಕಳು ಪ್ರಾಥಮಿಕ ಹಂತದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ, ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬೆಳೆಯಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ತಾಲ್ಲೂಕಾಧ್ಯಕ್ಷ ಅನೀಲಕುಮಾರ ಗುತ್ತೇದಾರ, ರಟಕಲ್ ಸಿಆರ್‌ಪಿ ದಯಾನಂದ ಹುಲಸಗೂಡ, ಪದವೀಧರ ಶಿಕ್ಷಕರ ಸಂಘದ ತಾಲ್ಲೂಕಾಧ್ಯಕ್ಷ ದೇವೀಂದ್ರ ಓಕಳಿ ಹಾಗೂ ಶಾಲೆಯ ಮುಖ್ಯಗುರು ಪಿತಾಂಬರ ಮಡಿವಾಳ ಮಾತನಾಡಿದರು.

ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ಶಾಂತಕುಮಾರ ಕಾರಪೆಂಟರ್, ಗಂಗಾಧರ ಸಾವಳಗಿ, ಅನೀಲಕುಮಾರ ಕೊಳ್ಳುರ, ಮಾಣಿಕರಾವ್, ಧರ್ಮಣ್ಣ ನಾವದಗಿ, ಪ್ರಭಾಕರ್ ಶ್ರೀಚಂದ್, ಶಿವಾಜಿ ಜಾಧವ್ ಸೇರಿದಂತೆ ಕ್ಲಸ್ಟರ್ ವ್ಯಾಪ್ತಿಯ ಶಿಕ್ಷಕರು, ಪೋಷಕರು ಹಾಗೂ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇದೇ ವೇಳೆ ಕಲಿಕಾ ಹಬ್ಬದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ಪ್ರೋತ್ಸಾಹಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News