×
Ad

Kalgi | ಬೆಣ್ಣೆತೋರಾ, ಗಂಡೋರಿ ನಾಲಾ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಪ್ರತಿಭಟನೆ

Update: 2026-01-14 12:15 IST

ಕಾಳಗಿ: ತಾಲೂಕಿನ ರೈತರ ಆಸರೆಯಾಗಬೇಕಿದ್ದ ಬೆಣ್ಣೆತೋರಾ ಮತ್ತು ಗಂಡೋರಿ ನಾಲಾ ಯೋಜನೆಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಳ್ಳ ಹಿಡಿದಿವೆ ಎಂದು ಆರೋಪಿಸಿ, ವಿವಿಧ ಮಠಾಧೀಶರು, ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ರೈತ ಸೇನೆ ವತಿಯಿಂದ ತಾಲೂಕಿನ ಕಂದಗೂಳ ಕ್ರಾಸ್‌ನಲ್ಲಿ ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಿದರು.

ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ರೈತ ಸೇನೆಯ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಪ್ರತಿಭಟನಾನಿರತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅತಿವೃಷ್ಟಿಯಿಂದಾಗಿ ತೊಗರಿ, ಉದ್ದು, ಹೆಸರು ಹಾಗೂ ಸೋಯಾಬೀನ್ ಬೆಳೆಗಳು ನಾಶವಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಮಾರುಕಟ್ಟೆಯಲ್ಲಿ ಬೆಲೆ ಇಲ್ಲದೆ ರೈತರು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಇರುವ ನೀರಾವರಿ ಯೋಜನೆಗಳೂ ರೈತರಿಗೆ ಪ್ರಯೋಜನಕ್ಕೆ ಬರುತ್ತಿಲ್ಲ," ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಯೋಜನೆಯ ಮುಖ್ಯ ಗೇಟ್‌ಗಳು ಮತ್ತು ಮರಿ ಕಾಲುವೆಗಳು ತುಕ್ಕು ಹಿಡಿದಿವೆ. ಕಾಲುವೆಗಳಲ್ಲಿ ಮುಳ್ಳು ಕಂಟಿಗಳು ಬೆಳೆದು ಹೂಳು ತುಂಬಿಕೊಂಡಿದ್ದು, ನೀರು ಹರಿಯದಂತಾಗಿದೆ. ತಕ್ಷಣವೇ ಕಾಲುವೆಗಳ ದುರಸ್ತಿ ಮಾಡಿ, ಹೂಳು ತೆಗೆಯುವ ಮೂಲಕ ಬೇಸಿಗೆಯ ಬೆಳೆಗೆ ನೀರು ಹರಿಸಬೇಕು ಎಂದು ಅವರು ಆಗ್ರಹಿಸಿದರು.

ನಂತರ ಗಂಡೋರಿ ನಾಲಾ ಎಇಇ ದಿನೇಶ ಚವ್ಹಾಣ ಅವರಿಗೆ ಮನವಿ ಪತ್ರ‌ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ರಟಕಲ್‌ನ ರೇವಣಸಿದ್ದ ಶಿವಾಚಾರ್ಯರು, ಮುರುಗೇಂದ್ರ ಮಠದ ನೀಲಕಂಠ ದೇವರು, ಗೌರಿಗುಡ್ಡದ ರೇವಣಸಿದ್ದ ಶರಣರು ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ಸೂಚಿಸಿದರು.

ರೈತ ಮುಖಂಡರಾದ ರೆವಣಸಿದ್ದಪ್ಪ ಸಾತನೂರು, ಶರಣಬಸಪ್ಪ ಮಮಶೆಟ್ಟಿ, ಶಿವರಾಜ್ ಪಾಟೀಲ್ ಗೊಣಗಿ, ವೀರಣ್ಣ ಗಂಗಾಣಿ, ಮಂಜು ಪಾಟೀಲ್, ರಾಯಪ್ಪಾ ಪಾಟೀಲ್, ಮಲ್ಲಿಕಾರ್ಜುನ ಪಾಟೀಲ್, ಮಲ್ಲಿನಾಥ ಮುಚ್ಚೆಟ್ಟಿ, ಸಿದ್ದಪ್ಪಾ ಕಲಸೆಟ್ಟಿ, ಗುಂಡಪ್ಪಾ ಅರಣಕಲ್, ಸಿದ್ದನಗೌಡ,ಸಿದ್ದಯ್ಯಾ ಸ್ವಾಮಿ, ಗಿರೀಶ ದೇವರಮನಿ, ನೀಲಕಂಠ ಕಲಬುರಗಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಹಾಜರಿದ್ದರು



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News