ದೀಪಾವಳಿ ಹಬ್ಬದ ಪ್ರಯುಕ್ತ ಕೆಕೆಆರ್‌ಟಿಸಿ ಸಂಸ್ಥೆಯಿಂದ 600 ಹೆಚ್ಚುವರಿ ಬಸ್ ಕಾರ್ಯಾಚರಣೆ: ಡಾ.ಬಿ.ಸುಶೀಲಾ
ಕಲಬುರಗಿ: ದೀಪಾವಳಿ ಹಬ್ಬ ಹಾಗೂ ಹುಲಿಜಂತಿ ಶ್ರೀ ಮಾಳಿಂಗರಾಯ ಜಾತ್ರಾ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಜಿಲ್ಲಾ ಮತ್ತು ತಾಲೂಕು ಕೇಂದ್ರದಿಂದ ಬೆಂಗಳೂರು, ಹುಲಿಜಂತಿ ಹಾಗೂ ಇತರೆ ಸ್ಥಳಗಳಿಗೆ ಹೋಗಿ ಬರಲು ಪ್ರಯಾಣಿಕರ ಅನುಕೂಲಕ್ಕಾಗಿ 600 ಹೆಚ್ಚುವರಿ ಬಸ್ ಕಾರ್ಯಾಚರಣೆ ಮಾಡಲಾಗುತ್ತಿದ್ದು, ಸಾರ್ವಜನಿಕರು ಮತ್ತು ಪ್ರಯಾಣಿಕರು ಇದರ ಸೌಲಭ್ಯ ಪಡೆಯಬೇಕು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಡಾ.ಬಿ.ಸುಶೀಲಾ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಅಕ್ಟೋಬರ್ 16, 17 ಮತ್ತು 18 ರಂದು ಸಂಸ್ಥೆ ವ್ಯಾಪ್ತಿಯ ಜಿಲ್ಲಾ ಮತ್ತು ತಾಲೂಕು ಕೇಂದ್ರದಿಂದ ಬೆಂಗಳೂರು ಮತ್ತು ಇತರೆ ಪ್ರಮುಖ ಸ್ಥಳಗಳಿಗೆ ಹಾಗೂ ಅಕ್ಟೋಬರ್ 17, 18, ಮತ್ತು 19 ರಂದು ಬೆಂಗಳೂರಿನಿಂದ ಇತರೆ ಸ್ಥಳಗಳಿಗೆ ಹೆಚ್ಚುವರಿ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ. ಹುಲಿಜಂತಿ ಶ್ರೀ ಮಾಳಿಂಗರಾಯ ಜಾತ್ರಾ ಪ್ರಮುಖ ದಿನಗಳಾದ ಅಕ್ಟೋಬರ್ 20, 21 ಮತ್ತು 22 ರಂದು ಜಾತ್ರಾ ಸಾರಿಗೆಗಳ ಭಕ್ತಾದಿಗಳು ಪ್ರಯೋಜನ ಪಡೆಯಬಹುದಾಗಿದೆ. ಇನ್ನು ಹಬ್ಬ ಮತ್ತು ರಜೆ ಮುಗಿದ ನಂತರ ಅಕ್ಟೋಬರ್ 22 ರಿಂದ 26ರವರೆಗೆ ಸಹ ಸಂಚಾರ ದಟ್ಟಣೆಗನುಗುಣವಾಗಿ ವಾಹನಗಳ ಕಾರ್ಯಾಚರಣೆ ನಡೆಯಲಿದೆ ಎಂದಿದ್ದಾರೆ.
ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಸಾರಿಗೆ ಬಸ್‍ನಲ್ಲಿ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಅವಕಾಶವಿದ್ದು, ಪ್ರಯಾಣಿಕರು ಕರ್ನಾಟಕ ಹಾಗೂ ಅಂತರ ರಾಜ್ಯದಲ್ಲಿರುವ 18 ಗಣಕೀಕೃತ ಬುಕ್ಕಿಂಗ್ ಕೌಂಟರ್ ಗಳ ಮುಖಾಂತರ ಆಸನ ಕಾಯ್ದಿರಿಸಬಹುದಾಗಿದೆ. 4 ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿದಲ್ಲಿ ಶೇ.5ರಷ್ಟು ಹಾಗೂ ಹೋಗುವ ಮತ್ತು ಬರುವ ಪ್ರಯಾಣದ ಟಿಕೇಟನ್ನು ಒಟ್ಟಿಗೆ ಕಾಯ್ದಿರಿಸಿದಲ್ಲಿ ಪ್ರಯಾಣ ದರದಲ್ಲಿ ಶೇ.10 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮುನ್ನ ಮುಂಗಡ ಟಿಕೇಟುಗಳ ಮೇಲೆ ನಮೂದಿಸಲಾಗಿರುವ ಬಸ್ ನಿಲ್ದಾಣ, ಪಿಕ್ ಅಪ್ ಪಾಯಿಂಟ್ ಸ್ಥಳ ಮತ್ತು ಹೆಸರು ಗಮನಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.