×
Ad

ಜೂ.1ರಿಂದ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ 1 ಲಕ್ಷ ಸಸಿ ನೆಡುವ ಯೋಜನೆಗೆ ಚಾಲನೆ : ಸಚಿವ ಈಶ್ವರ್ ಖಂಡ್ರೆ

Update: 2025-05-10 18:34 IST

ಕಲಬುರಗಿ : ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳು ಶೇ.10ಕ್ಕಿಂತ ಕಡಿಮೆ ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆಗಳ ಪಟ್ಟಿಯಲ್ಲಿದ್ದು, ಇಲ್ಲಿ ಹಸಿರು ಹೊದಿಕೆ ಹೆಚ್ಚಿಸಲು ಜೂ.1 ರಿಂದ ಒಂದು ಲಕ್ಷ ಸಸಿ ನೆಡುವ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವ ಈಶ್ವರ್ ಖಂಡ್ರೆ ಹೇಳಿದರು.

ಶನಿವಾರ ಕಲಬುರಗಿಯ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ-ಶೇ.5, ಬಳ್ಳಾರಿ-ಶೇ.7, ಯಾದಗಿರಿ ಮತ್ತು ರಾಯಚೂರು ತಲಾ ಶೇ.3ರಷ್ಟು ಮಾತ್ರ ಅರಣ್ಯ ಪ್ರದೇಶ ಇದೆ. ಹೀಗಾಗಿ ಜೂ.1 ರಿಂದ ಈ ನಾಲ್ಕು ಜಿಲ್ಲೆಗಳಲ್ಲಿ ವಿಶೇಷವಾಗಿ ರಸ್ತೆ ಬದಿಯಲ್ಲಿ 1 ಲಕ್ಷ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಮುಂದಿನ 10-15 ವರ್ಷದಲ್ಲಿ ಶೇ.10-20 ರಷ್ಟು ಅರಣ್ಯ ಪ್ರಮಾಣ ಹೆಚ್ಚಿಸಲು ಯೋಜನೆ ರೂಪಿಸಲಾಗುತ್ತಿದೆ. ಚಿತ್ತಾಪುರ ಕ್ಷೇತ್ರದ ಮಾಡಬೂಳದಲ್ಲಿ 60 ಕೋಟಿ ರೂ. ವೆಚ್ಚದಲ್ಲಿ ಸುಮಾರು 40 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗುತ್ತಿರುವ ಪ್ರಾಣಿ ಸಂಗ್ರಹಾಲಯ ಕಾರ್ಯ ಭರದಿಂದ ಸಾಗಿದ್ದು, ಇಂದು ಕಾಮಗಾರಿ ವೀಕ್ಷಿಸಿದ್ದೇನೆ. ಡಿಸೆಂಬರ್ ಅಂತ್ಯದೊಳಗೆ ಇದನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಈಶ್ವರ್ ಖಂಡ್ರೆ ತಿಳಿಸಿದರು.

ಪ್ರಾಣಿ ಸಂಗ್ರಹಾಲಯ ಸ್ಥಾಪನೆಯಾದ ನಂತರ ಹುಲಿ, ಸಿಂಹ, ಚಿರತೆ ಸೇರಿದಂತೆ ಅನೇಕ ಪ್ರಾಣಿಗಳ ವೀಕ್ಷಣೆಯ ಅವಕಾಶ ದೊರೆಯಲಿದೆ. ಇಲ್ಲಿನ ಸಿಬ್ಬಂದಿಗಳಿಗೆ ಮೈಸೂರು, ಬನ್ನೇರುಘಟ್ಟದಲ್ಲಿ ತರಬೇತಿ ನೀಡಲಾಗುವುದು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಕೆ.ಕೆ.ಅರ್.ಡಿ.ಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್, ಶಾಸಕ ತಿಪ್ಪಣ್ಣಪ್ಪ ಕಮಕನೂರ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಶರಣು ಮೋದಿ, ಮುಖಂಡ ನೀಲಕಂಠ ಮೂಲಗೆ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News