×
Ad

ಕುಸುಮ್‌- ಸಿ ಯೋಜನೆಯಡಿ 43 ಮೆ.ವ್ಯಾ. ಸೋಲಾರ್ ವಿದ್ಯುತ್ ಉತ್ಪಾದನೆ : ಸಚಿವ ಕೆ.ಜೆ.ಜಾರ್ಜ್

Update: 2025-01-24 14:46 IST

ಕಲಬುರಗಿ : ರೈತರ ಕೃಷ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಮಸ್ಯೆಯಾಗದಂತೆ ಜೆಸ್ಕಾಂ ವ್ಯಾಪ್ತಿಯ ಕಲಬುರಗಿ, ರಾಯಚೂರು, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಯ 10 ವಿದ್ಯುತ್ ಉಪ ವಿತರಣಾ ಕೇಂದ್ರದ 5 ಕಿ.ಮೀ. ವ್ಯಾಪ್ತಿಯಲ್ಲಿ ಕುಸುಮ್- ಸಿ ಯೋಜನೆಯಡಿ ಫೀಡರ್ ಸೋಲರೈಸೇಷನ್ ಮೂಲಕ 43 ಮೆಗಾ ವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ಇಂಧನ ಇಲಾಖೆಗೆ ಸಂಬಂಧಿಸಿದಂತೆ ಇಲ್ಲಿನ ಜೆಸ್ಕಾಂ ಕೇಂದ್ರ ಕಾರ್ಯಾಲಯದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಜೆಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳೊಂದಿಗಿನ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯ ಹಡಗಿಲ್ ಹಾರುತಿ, ವಿ.ಕೆ.ಸಲಗರ್ ಹಾಗೂ ಗೊಬ್ಬೂರ ಸಬ್ ಸ್ಟೇಷನ್ ವ್ಯಾಪ್ತಿಯಲ್ಲಿ ಫೀಡರ್ ಸೋಲರೈಸೇಷನ್ ಮಾಡಲಾಗುತ್ತಿದೆ. ಖಾಸಗಿ ಕಂಪನಿಗಳೇ ಸೋಲಾರ್ ಘಟಕ ಸ್ಥಾಪಿಸಿ ವಿದ್ಯುತ್ ಪೂರೈಸಲಿದ್ದು, ಸರ್ಕಾರದಿಂದ ಪ್ರತಿ ಯೂನಿಟ್ ವಿದ್ಯುತ್ತಿಗೆ 2.95 ರೂ. ನಿಂದ ಗರಿಷ್ಠ 3.17 ರೂ.ವರೆಗೆ ಖಾಸಗಿಯವರಿಗೆ ಪಾತಿಸಲಾಗುವುದು. ಈ ವಿದ್ಯುತ್ತನ್ನು ಪಕ್ಕದ ಫೀಡರ್ ಗೆ ರವಾನಿಸಿ ಸುತ್ತಮುತ್ತಲಿನ 5 ಕಿ.ಮೀ. ವ್ಯಾಪ್ತಿಯ 4,456 ರೈತರ ಪಂಪ್ ಸೆಟ್‌ಗಳಿಗೆ ಪೂರೈಸಲಾಗುತ್ತದೆ ಎಂದು ವಿವರಿಸಿದರು.

ಕುಸುಮ್-ಸಿ ಅಡಿ ಸಾವಿರ ಮೆ.ವ್ಯಾ. ವಿದ್ಯುತ್:

ರಾಜ್ಯಾದ್ಯಂತ ಕುಸುಮ್- ಸಿ ಯೋಜನೆಯಡಿ ಎರಡು ಹಂತಗಳಲ್ಲಿ 400 ಸಬ್ ಸ್ಟೇಷನ್ ವ್ಯಾಪ್ತಿಯಲ್ಲಿ 3,000 ಮೆಗಾ ವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಗೆ ಯೋಜನೆ ಹಾಕಿಕೊಂಡಿದ್ದು, 1 ಮೆಗಾ ವ್ಯಾಟ್ ಘಟಕಕ್ಕೆ 4 ಎಕರೆ ಜಮೀನು ಅವಶ್ಯಕತೆ ಇದೆ. ಇದಕ್ಕಾಗಿ ಸರ್ಕಾರಿ ಜಮೀನು ಉಚಿತವಾಗಿ ಪಡೆಯಲು ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಸರ್ಕಾರಿ ಜಮೀನು ಇಲ್ಲದಿದ್ದಲ್ಲಿ ಖಾಸಗಿ ಜಮೀನು ಲೀಸ್ ಪಡೆದು ಯೋಜನೆ ಆರಂಭಿಸಲಾಗುತ್ತಿದೆ ಎಂದರು.

ಕರ್ನಾಟಕವು ಈ ಹಿಂದೆ ಸಾಕಷ್ಟು ವಿದ್ಯುತ್ ಸಮಸ್ಯೆ ಎದುರಿಸುತ್ತಿತ್ತು. ಕಳೆದ ಬಾರಿ ಬೇಸಿಗೆಯಲ್ಲೂತೀವ್ರ ವಿದ್ಯುತ್ ಅಭಾವ ಸೃಷ್ಟಿಯಾಗಿತ್ತು. ಆ ವೇಳೆ ಪಂಜಾಬ್ ಮತ್ತು ಉತ್ತರಪ್ರದೇಶ ರಾಜ್ಯದಿಂದ ವಿನಿಮಯ ಆಧಾರದಲ್ಲಿ ವಿದ್ಯುತ್ ಪಡೆದು ರೈತರು ಸೇರಿದಂತೆ ರಾಜ್ಯದ ಜನರಿಗೆ ಸಮರ್ಪಕ ವಿದ್ಯುತ್ ಪೂರೈಸಲಾಗಿದೆ. ಈ ಬಾರಿ ಮಳೆ ಉತ್ತಮವಾಗಿ ಬಂದು ಜಲಾಶಯಗಳಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದ್ದು, ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆಗೆ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು.

ಟ್ರಾನ್ಸ್ ಫಾರ್ಮರ್ ಗಳ ದುರಸ್ತಿ, ಅಥವಾ ಬದಲಾವಣೆಗೆ ತುರ್ತು ಕ್ರಮ ಕೈಗೊಳ್ಳಬೇಕು. ವಿದ್ಯುತ್ ತಂತಿ, ಕಂಬಗಳ ದುರಸ್ತಿ ಸೇರಿದಂತೆ ವಿದ್ಯುತ್ ಪೂರೈಕೆಯಲ್ಲಿ ಆಗುವ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಿ ಬಗೆಹರಿಸಬೇಕು. ಸ್ಥಳೀಯ ಜನಪ್ರತಿನಿಧಿಗಳನ್ನು ಭೇಟಿಯಾಗಿ ಅವರ ವ್ಯಾಪ್ತಿಯಲ್ಲಿರುವ ಸಮಸ್ಯೆಗಳ ಕುರಿತು ಚರ್ಚಿಸಿ ಅವುಗಳನ್ನು ಬಗೆಹರಿಸಬೇಕು. ವಿದ್ಯುತ್ ಪೂರೈಕೆಗೆ ಯಾವುದೇ ಸಮಸ್ಯೆಗಳಿದ್ದಲ್ಲಿ ಅವುಗಳನ್ನು ಜಪ್ರತಿನಿಧಿಗಳ ಗಮನಕ್ಕೆ ತಂದು ಅವರ ಮೂಲಕ ಬಗೆಹರಿಸಿಕೊಳ್ಳಬೇಕು", ಎಂದು ಇಲಾಖೆ ಅಧಿಕಾರಿಗಳು ಸೂಚಿಸಿದರು.

ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ದಕ್ಷಿಣ ವಿಧಾನಸಭಾ ಕ್ಷೇತ್ರದ ಕಲಬುರಗಿ ನಗರದಲ್ಲಿ ಹೆಚ್ಚುವರಿ ಸಬ್ ಸ್ಟೇಷನ್ ಜತೆಗೆ ಪಟ್ಟಣ ಹೋಬಳಿಯಲ್ಲಿ ಒಂದು ವಿದ್ಯುತ್ ಸಬ್ ಸ್ಟೇಷನ್ ಮಂಜೂರು ಮಾಡಬೇಕಿದೆ. ಕಲಬುರಗಿ ನಗರದ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿ ವಿದ್ಯುತ್ ಲೈನ್ ತಲೆ ಮೇಲೆ ನೇತಾಡುತ್ತಿದ್ದು, ಅಲ್ಲಿ ಭೂಗತ ಕೇಬಲ್ (ಅಂಡರ್ ಗ್ರೌಂಡ್) ಅಳವಡಿಸಬೇಕೆಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆ.ಜೆ.ಜಾರ್ಜ್, ಜನನಿಬಿಡಿತ ಪ್ರದೇಶ ಆಗಿರುವುದರಿಂದ ಭೂಗತ ಕೇಬಲ್ ಅಳವಡಿಸುವಂತೆ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಅವರಿಗೆ ಸೂಚಿಸಿದರು.

ವಿದ್ಯುತ್ ಅಪಘಾತಕ್ಕೆ ಒಳಗಾದವರಿಗೆ ಗರಿಷ್ಠ ಪರಿಹಾರ:

ಕಲಬುರಗಿ ನಗರದ ಮೋಹನ್ ಲಾಡ್ಜ್ ಬಳಿ ಇತ್ತೀಚೆಗೆ ವಿದ್ಯುತ್ ಅವಘಡದಿಂದ ಎರಡು ಕಾಲು ಕಳೆದುಕೊಂಡು ನಗರದ ಯುನೈಟೆಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತ ಮಹಿಳೆಗೆ ಜೆಸ್ಕಾಂ 1 ಲಕ್ಷ ರೂ. ಪರಿಹಾರ ನೀಡಿದೆ. ಇಬ್ಬರು ಬುದ್ದಿ ಮಾಂದ್ಯ ಮಕ್ಕಳನ್ನು ಹೊಂದಿರುವ ಸಂತ್ರಸ್ತೆಯ ಇದುವರೆಗಿನ ಆಸ್ಪತ್ರೆ ವೆಚ್ಚ 12 ಲಕ್ಷ ರೂ. ಆಗಿದ್ದು, ಚಿಕಿತ್ಸೆ ಮುಂದುವರಿದಿದೆ. ಆಸ್ಪತ್ರೆ ವೆಚ್ಚವನ್ನು ಜೆಸ್ಕಾಂನಿಂದ ಭರಿಸುವುದರ ಜತೆಗೆ ಕುಟುಂಬಕ್ಕೆ ಎಲ್ಲಾ ರೀತಿಯ ಪರಿಹಾರ ಒದಗಿಸಬೇಕು ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಮನವಿ ಮಾಡಿದಾಗ ಸ್ಪಂದಿಸಿದ ಸಚಿವ ಕೆ.ಜೆ.ಜಾರ್ಜ್, ಜೆಸ್ಕಾಂನಿಂದ ಗರಿಷ್ಠ ಪರಿಹಾರ ಒದಗಿಸುವ ಭರವಸೆ ನೀಡಿದರು.

ಸಭೆಯಲ್ಲಿ ಶಾಸಕರಾದ ಬಸವರಾಜ ಮತ್ತಿಮೂಡ, ಎಂ.ವೈ.ಪಾಟೀಲ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಕರಲಿಂಗಣ್ಣವರ, ಮುಖ್ಯ ಇಂಜಿನಿಯರ್ (ಕಾರ್ಯಾಚರಣೆ) ಆರ್.ವೆಂಕಟೇಶ ಪ್ರಸಾದ್, ಕಲಬುರಗಿ ವಲಯದ ಮುಖ್ಯ ಇಂಜಿನಿಯರ್ ವೆಂಕಟೇಶ ಹಾಲ್ವಿ, ಮುಖ್ಯ ಆರ್ಥಿಕ ಅಧಿಕಾರಿ ಮುರಳೀಧರ ನಾಯಕ್, ಕಲಬುರಗಿ ಮತ್ತು ಯಾದಗಿರಿ ಅಧೀಕ್ಷಕ ಅಭಿಯಂತರ ಖಂಡೆಪ್ಪ ಸೋನಾವಣೆ ಸೇರಿದಂತೆ ಜೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಗಳು ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳು ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News