ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ಕ್ರಮವಹಿಸುವಂತೆ ಸಕ್ಕರೆ ಸಚಿವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ
ಪ್ರಿಯಾಂಕ್ ಖರ್ಗೆ
ಕಲಬುರಗಿ: ಕಲಬುರಗಿ ಜಿಲ್ಲೆಯ ಕಬ್ಬು ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕಾಗಿ ಅಗತ್ಯ ಕ್ರಮವಹಿಸುವಂತೆ ಕೋರಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಜವಳಿ, ಕಬ್ಬು ಅಭಿವೃದ್ದಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರಿಗೆ ಪತ್ರ ಬರೆದಿದ್ದಾರೆ.
ಕಬ್ಬ ಬೆಳೆಗಾರರ ಸಮಸ್ಯೆಗಳ ಕುರಿತು ರೈತ ಸಂಘಟನೆಗಳು ನ್ಯಾಯಯುತ ಹಾಗೂ ಲಾಭದಾಯಕ ಬೆಲೆ, ಕಬ್ಬು ಕಟಾವು ಹಾಗೂ ಸಾಗಾಣಿಕೆ ವೆಚ್ಚದಲ್ಲಿ ಆಗುತ್ತಿರುವ ಅನ್ಯಾಯ ಮತ್ತು ಕಬ್ಬು ಬೆಳೆಗಾರರಿಗೆ ಸಕಾಲದಲ್ಲಿ ಹಣ ಪಾವತಿ ಸೇರಿದಂತೆ ಇತರೆ ಸಮಸ್ಯೆಗಳ ಪರಿಹಾರಕ್ಕೆ ಬೇಡಿಕೆ ಈಡೇರಿಕೆಗೆ ಆಗ್ರಹಿಸಿರುವ ಹಿನ್ನೆಲೆಯಲ್ಲಿ ಸಚಿವರ ಪತ್ರಬರೆದಿರುವುದು ರೈತರಲ್ಲಿ ಆಶಾಭಾವನೆ ಮೂಡಿಸಿದೆ.
2025-26ನೇ ಸಾಲಿಗೆ ಭಾರತ ಸರ್ಕಾರದಿಂದ ನಿಗದಿಪಡಿಸಿದ ಸಕ್ಕರೆ ಇಳುವರಿಯು ಶೇ.10.25ರಷ್ಟು ಆಗಿದ್ದು, ಪ್ರತಿ ಟನ್ ಕಬ್ಬಿಗೆ 3,550 ರೂ. ನಿಗದಿಪಡಿಸಲಾಗಿರುತ್ತದೆ. ಭಾರತ ಸರ್ಕಾರದ Sugarcane Control Order 1966 ಪ್ರಕಾರ ಎಲ್ಲಾ ಸಕ್ಕರೆ ಕಾರ್ಖಾನೆಗಳು ನ್ಯಾಯಯುತ ಹಾಗೂ ಲಾಭದಾಯಕ ಬೆಲೆಯ (FRP-Fair and Remunerative Price) ಪ್ರಕಾರ ರೈತರಿಗೆ ದರ ನೀಡಬೇಕಾಗಿರುತ್ತದೆ. ಆದರೆ, ಭಾರತ ಸರ್ಕಾರವು ನಿಗದಿಪಡಿಸಿರುವ ಸಕ್ಕರೆ ಇಳುವರಿ ದರವು ನ್ಯಾಯ ಸಮ್ಮತವಾಗಿರುವುದಿಲ್ಲ ಎಂದು ಸಚಿವರು ಹೇಳಿದ್ದಾರೆ.
ನ್ಯಾಯಯುತ ಹಾಗೂ ಲಾಭದಾಯಕ ಬೆಲೆ (FRP) :
ಭಾರತ ಸರ್ಕಾರವು ನಿಗದಿಪಡಿಸಿದ ನ್ಯಾಯಯುತ ಹಾಗೂ ಲಾಭದಾಯಕ ಬೆಲೆ (FRP) ನಿಗದಿಯು ಅವೈಜ್ಞಾನಿಕವಾಗಿದ್ದು, ಬೆಲೆ ಏರಿಕೆಯಿಂದಾಗಿ ಕಬ್ಬು ಕೃಷಿಯ ವೆಚ್ಚವು ಏರಿಕೆಯಾಗಿದ್ದು, ಇದರಿಂದಾಗಿ ರೈತರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಕಬ್ಬು ಕೃಷಿಗೆ ತಗಲುವ ವೆಚ್ಚವನ್ನು ವೈಜ್ಞಾನಿಕವಾಗಿ ಅವಲೋಕಿಸಿ ಸಕ್ಕರೆ ಇಳುವರಿ ಪ್ರಮಾಣ ಶೇ.9.5ರ ಆಧಾರದ ಮೇಲೆ ನ್ಯಾಯಯುತ ಹಾಗೂ ಲಾಭದಾಯಕ ಬೆಲೆ (FRP) ಘೋಷಿಸಲು ಭಾರತ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಒತ್ತಾಯಿಸುತ್ತಿದ್ದಾರೆ.
ರೈತರ ಬೇಡಿಕೆ ನ್ಯಾಯಸಮ್ಮತವಾಗಿದ್ದು, ಅವರ ಹಿತರಕ್ಷಣೆ ಕಾಪಾಡುವುದು ನಮ್ಮ ಸರ್ಕಾರದ ಆಶಯವಾಗಿರುವುದರಿಂದ, ಸದರಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ರಾಜ್ಯ ಮಟ್ಟದಲ್ಲಿ ರೈತರನ್ನೊಳಗೊಂಡ ಒಂದು ತಜ್ಞರ ಸಮಿತಿ (Expert Committee) ಯನ್ನು ರಚಿಸಿ, FRP ನಿಗದಿಯಲ್ಲಿ ಆಗುತ್ತಿರುವ ಅನ್ಯಾಯವನ್ನು ಗುರುತಿಸಿ ಭಾರತ ಸರ್ಕಾರಕ್ಕೆ ಸಲಹೆಗಳನ್ನು ನೀಡುವುದು ಸೂಕ್ತವಾಗಿರುತ್ತದೆ ಎಂದು ಸಚಿವರು ಹೇಳಿದ್ದಾರೆ.
ಸಕ್ಕರೆ ಇಳುವರಿ (Recovery Percentage):
ಕಲಬುರಗಿ ಜಿಲ್ಲೆಯಲ್ಲಿ ಒಂದೇ ರೀತಿಯ ಹವಾಮಾನ, ಮಣ್ಣಿನ ಗುಣ, ನೀರಾವರಿ ಸೌಲಭ್ಯ ಇದ್ದರು, ಸಕ್ಕರೆ ಕಾರ್ಖಾನೆಗಳು ತಮ್ಮ ಅನುಕೂಲಕ್ಕೆ ತಕ್ಕಂತೆ, ಸಕ್ಕರೆ ಇಳುವರಿ ಕಡಿಮೆ ತೋರಿಸಿ ಅನ್ಯಾಯ ಮಾಡುತ್ತಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ 5 ಸಕ್ಕರೆ ಕಾರ್ಖಾನೆಗಳಿದ್ದು, ಎಲ್ಲಾ 5 ಸಕ್ಕರೆ ಕಾರ್ಖಾನೆಗಳು, ವಿವಿಧ ರೀತಿಯ ಇಳುವರಿ ದರಗಳ ಮಾಹಿತಿಯನ್ನು ಸರ್ಕಾರಕ್ಕೆ ವರದಿ ಸಲ್ಲಿಸಿ, ರೈತರಿಗೆ ಮೋಸ ಮಾಡುತ್ತಿದ್ದಾರೆ ಹಾಗೂ ಸಕ್ಕರೆ ಕಾರ್ಖಾನೆಗಳಲ್ಲಿ ತಮ್ಮ ಪ್ರಯೋಗಾಲಯದಿಂದ ಇಳುವರಿ ಪ್ರಮಾಣವನ್ನು ಅಳತೆ ಮಾಡಿ, ಸರ್ಕಾರಕ್ಕೆ ವರದಿ ಸಲ್ಲಿಸುತ್ತಿದ್ದು, ಇದರಲ್ಲಿ ಪಾರದರ್ಶಕತೆ ಕಂಡುಬರುತ್ತಿಲ್ಲವೆಂದು ಕಬ್ಬು ಬೆಳೆಗಾರರು ದೂರು ಸಲ್ಲಿಸಿದ್ದಾರೆ.
ಆಧುನಿಕ ತಂತ್ರಜ್ಞಾನ ಬಳಸಿ, ಜಿಲ್ಲಾಧಿಕಾರಿಗಳ ಪರಿವೀಕ್ಷಣೆಯಲ್ಲಿ ಸರ್ಕಾರದ ವತಿಯಿಂದ ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯಗಳ ರಾಷ್ಟ್ರೀಯ ಮಾನ್ಯತೆ ಮಂಡಳಿಯಿಂದ ಮಾನ್ಯತೆ ಪಡೆದ ಪ್ರಯೋಗಾಲಯವನ್ನು ಪ್ರತಿ ಸಕ್ಕರೆ ಕಾರ್ಖಾನೆಯಲ್ಲಿ ಸ್ಥಾಪಿಸಿ, ಪ್ರತಿ ದಿನ ವರದಿ ಪಡೆದು, ಸರ್ಕಾರಕ್ಕೆ ಸಾರ್ವಜನಿಕರಿಗೆ ಹಾಗೂ ರೈತರಿಗೆ ನೀಡುವ ವಿಧಾನವನ್ನು ಕಲಬುರಗಿ ಜಿಲ್ಲೆಯಿಂದಲೇ ಪ್ರಾರಂಭಿಸಲು ರೈತರ ಬೇಡಿಕೆ ಇರುತ್ತದೆ. ಬೇಡಿಕೆಗಳು ನ್ಯಾಯಸಮ್ಮತ, ತಂತ್ರಜ್ಞಾನ ಆಧಾರಿತ, ಪಾರದರ್ಶಕ ಬೇಡಿಕೆಯಾಗಿದ್ದು, ರೈತರ ಹಿತರಕ್ಷಣೆ ದೃಷ್ಟಿಯಿಂದ ಅವರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ, ಪರಿಗಣಿಸಬಹುದಾಗಿದೆ ಎಂದು ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ.
2025-26ನೇ ಸಾಲಿನ ಕಬ್ಬು ಕಟಾವು ಮತ್ತು ಸಾಗಾಣಿಕಾ ವೆಚ್ಚದ ಮಾರ್ಗಸೂಚಿಗಳ ಪ್ರಕಾರ ಸಕ್ಕರೆ ಇಳುವರಿ ಪ್ರಮಾಣ ಮತ್ತು ತೂಕದಲ್ಲಿ ಮೋಸವಾಗುತ್ತಿದ್ದು, ಹಾಗೂ ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ಕಡಿತ ಮಾಡುವಲ್ಲಿಯೂ ರೈತರಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ರೈತರ ಜಮೀನುಗಳಿಂದ ಸ್ವೀಕೃತಿ ಕೆಂದ್ರದವರೆಗೆ ಜಿ.ಪಿ.ಎಸ್ ಮ್ಯಾಪಿಂಗ್ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಕಡ್ಡಾಯಗೊಳಿಸುವುದು ಹಾಗೂ ಕಬ್ಬು ಅಭಿವೃದ್ಧಿ ಆಯುಕ್ತರು 2025 ರ ಆಗಸ್ಟ್ 26 ರ ಆದೇಶದಲ್ಲಿ ನಿಗದಿಪಡಿಸಿರುವ ಸಾಗಾಣಿಕೆ ವೆಚ್ಚವನ್ನು ನೀಡುವಂತೆ ಕಬ್ಬು ಬೆಳೆಗಾರರು ಹಾಗೂ ರೈತರು ಮನವಿ ಸಲ್ಲಿಸಿರುತ್ತಾರೆ.
ರೈತರ ಬೇಡಿಕೆಯನ್ನು ಉಲ್ಲೇಖಿಸಿ, ರೈತರ ಈ ಬೇಡಿಕೆಯು ನ್ಯಾಯ ಸಮ್ಮತವಾಗಿರುವುದರಿಂದ ಕಬ್ಬು ಅಭಿವೃದ್ಧಿ ಆಯುಕ್ತರ ಇತ್ತೀಚೆಗೆ ನಿಗದಿಪಡಿಸಿರುವ ಪರಿಷ್ಕೃತ ಸಾಗಾಣಿಕೆ ದರಗಳನ್ನು ಪಾವತಿಸುವಂತೆ ಹಾಗೂ ಕಟಾವು ಮತ್ತು ಸಾಗಾಣಿಕೆ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲು ಸಕ್ಕರೆ ಕಾರ್ಖಾನೆಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬಹುದಾಗಿದೆ ಹಾಗೂ ಇಲಾಖೆಯ ಅಧಿಕಾರಿಗಳನ್ನು ಮೇಲುಸ್ತುವಾರಿ ನಡೆಸಲು ಸೂಚಿಸಬಹುದಾಗಿದೆ ಎಂದು ಸಚಿವರು ಹೇಳಿದ್ದಾರೆ.
ಕಬ್ಬು ಬೆಳೆಗಾರರಿಗೆ ಸಕಾಲದಲ್ಲಿ ಹಣ ಪಾವತಿ :
ಕಲಬುರಗಿ ಜಿಲ್ಲೆಯ ಗಡಿ ಭಾಗದ ಗ್ರಾಮಗಳ ಬೆಳೆಗಾರರು ನೆರೆ ರಾಜ್ಯಗಳಿಗೆ ಸಮೀಪದಲ್ಲಿದ್ದು ಸಕಾಲದಲ್ಲಿ ಹಣ ಸಿಗುತ್ತದೆಂಬ ಕಾರಣಕ್ಕೆ ಮಹಾರಾಷ್ಟ್ರ ಹಾಗೂ ತೆಲಂಗಾಣದೊಂದಿಗೆ ಗಡಿ ಹಂಚಿಕೊಂಡಿರುವುದರಿಂದ ಕಬ್ಬನ್ನು ಸಾಗಿಸುತ್ತಿದ್ದಾರೆ ಹಾಗೂ ಇತ್ತೀಚಿನ ವರ್ಷಗಳಲ್ಲಿ ಸಕಾಲಕ್ಕೆ ಬಾಕಿ ಪಾವತಿ ಮಾಡದೇ ಇರುವುದರಿಂದ ಹಾಗೂ ಬೆಲೆಯು ಕಮ್ಮಿ ನಿಗದಿಯಾಗಿರುವುದರಿಂದ ಜಿಲ್ಲೆಯಲ್ಲಿ ಹೆಚ್ಚು ಕಬ್ಬನ್ನು ಬೆಳೆಯುವ ಅಫಜಲಪುರ ತಾಲ್ಲೂಕಿನ ಸಕ್ಕರೆ ಕಾರ್ಖಾನೆಗಳೇ ನೆರೆಯ ರಾಜ್ಯಗಳಿಗೆ ಸಾಗಾಣಿಕೆ ಮಾಡುತ್ತಿದ್ದಾರೆ ಎಂದು ರೈತರು ತಿಳಿಸಿರುತ್ತಾರೆ.
ರೈತರ ಜಮೀನುಗಳಿಂದ ಕಬ್ಬು ಕಟಾವಾಗಿ ಕಾರ್ಖಾನೆಗೆ ಬಂದ 14 ದಿನಗಳೊಳಗಾಗಿ ಹಣ ಪಾವತಿಸುವುದು, ಭಾರತ ಸರ್ಕಾರದ ಕಬ್ಬು ನಿಯಂತ್ರಣ ಆದೇಶ 1966 ರ ಷರತ್ತು 3(1) ಪ್ರಕಾರ ಕಡ್ಡಾಯವಾಗಿರುತ್ತದೆ. ಒಂದು ವೇಳೆ 14 ದಿನಗಳಲ್ಲಿ ಹಣ ಪಾವತಿಸದಿದ್ದರೆ, ಷರತ್ತು 3(3A) ಪ್ರಕಾರ ಶೇ.15ರಷ್ಟು ಬಡ್ಡಿ ಸಹಿತ ಪಾವತಿಸಬೇಕಾಗುತ್ತದೆ ಹಾಗೂ ಷರತ್ತು 9ರ ( 2 ) ಪ್ರಕಾರ ಇಂತಹ ಪ್ರಕರಣಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಸಕ್ಕರೆ ಉತ್ಪಾದಕರಿಂದ ಅಥವಾ ಅವರ ಏಜೆಂಟ್ ಗಳಿಂದ ನಿರ್ದಿಷ್ಟಪಡಿಸಿದ ಮೊತ್ತವನ್ನು ಭೂ ಕಂದಾಯದ ಬಾಕಿಯಂತೆ ವಸೂಲಿ ಮಾಡಲು ಅಧಿಕಾರವಿರುತ್ತದೆ. ವಿತರಣೆಯ 14 ದಿನಗಳ ಒಳಗೆ ನ್ಯಾಯಯುತ ಹಾಗೂ ಲಾಭದಾಯಕ ಬೆಲೆಯ (FRP) ಪಾವತಿಸಲು ವಿಫಲವಾದರೆ, 1955 ರ ಅಗತ್ಯ ವಸ್ತುಗಳ ಕಾಯ್ದೆಯ ಕಲಂ 7 ರ ಪ್ರಕಾರ ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಖರ್ಗೆ ಮನವರಿಕೆ ಮಾಡಿದ್ದಾರೆ.
ಕಲಬುರಗಿ ಜಿಲ್ಲೆಯ ಕಬ್ಬು ಬೆಳೆಗಾರರು ಹಾಗೂ ರೈತ ಸಂಘಟನೆಗಳ ಸಮಸ್ಯೆಗಳನ್ನು ಅಲಿಸುವ ನಿಟ್ಟಿನಲ್ಲಿ ಸದರಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ರೈತರ ಅನುಕೂಲಕ್ಕಾಗಿ ಅಗತ್ಯ ಕ್ರಮವಹಿಸುವಂತೆ ಹಾಗೂ ಅನುಸರಣ ವರದಿಯನ್ನು ಸಲ್ಲಿಸಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಲು ಸಕ್ಕರೆ ಸಚಿವರಿಗೆ ಬರೆದ ಸುದೀರ್ಘ ಪತ್ರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ.