ಧರ್ಮ, ದೇವರ ಹೆಸರಿನಲ್ಲಿ ಪ್ರಧಾನಿ ಮೋದಿ ದೇಶವನ್ನೇ ಲೂಟಿ ಮಾಡುತ್ತಿದ್ದಾರೆ : ಮಲ್ಲಿಕಾರ್ಜುನ ಖರ್ಗೆ
ಕಲಬುರಗಿ: "ಧರ್ಮ, ದೇವರ ಹೆಸರಿನ ಮೇಲೆ ಪ್ರಧಾನಿ ಮೋದಿ ಇಡೀ ದೇಶವನ್ನೇ ಲೂಟಿ ಮಾಡುತ್ತಿದ್ದಾರೆ, ಇದರ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕು" ಎಂದು ಎಐಸಿಸಿ ಅಧ್ಯಕ್ಷ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಯಡ್ರಾಮಿಯಲ್ಲಿ ಕೆಕೆಆರ್ ಡಿಬಿ, ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ರಜಾಸೌಧ, 300 ಕೆ.ಪಿ.ಎಸ್ ಶಾಲೆಗಳ ಶಂಕು ಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಲೋಕ ಕಲ್ಯಾಣಕ್ಕಾಗಿ ದೇವರುಗಳು ಹುಟ್ಟಿದ್ದಾರೆ, ಆದರೆ ಮೋದಿ ವೋಟಿಗಾಗಿ ದೇವಾಲಯಗಳನ್ನು ಸುತ್ತಾಡಿ ಜನರನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಪಾಂಡಿಚೇರಿ ಚುನಾವಣೆಗಾಗಿ ಇಂತಹ ನಾಟಕ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಹಿಂದೂ-ಮುಸ್ಲಿಂ, ಹಿಂದೂ -ಸಿಖ್ ಜನರ ಮಧ್ಯೆ ಜಗಳ ಹಚ್ಚುವುದು ಇವರ ಕೆಲಸವಾಗಿದೆ, ಇದು ಕಲ್ಯಾಣ ಕರ್ನಾಟಕ, ಕಲ್ಯಾಣ ಕ್ರಾಂತಿ ಮಾಡಿರುವ ಬಸವಣ್ಣನ ಊರು. ನಮ್ಮ ಭಾಗ ಸಮಾನತೆಗೆ ಹೆಸರಿರುವಂತಹ ಸ್ಥಳವಾಗಿದೆ, ಜಗಳ ಹಚ್ಚುವಂತಹ ಸನ್ನಿವೇಶದಲ್ಲಿ ಒಗ್ಗಟ್ಟಾಗಿರಬೇಕು ಎಂದು ಕರೆ ನೀಡಿದರು.
ಬಡವರ ಹೊಟ್ಟೆ ಹೊಡೆಯುತ್ತಿರುವ ಮೋದಿ :
ಕೇಂದ್ರದಲ್ಲಿ ಯಾವುದೋ ಜೀ ರಾಮ್ ಜೀ ಎನ್ನುವ ಹೆಸರಿನಲ್ಲಿ ಕಾಯ್ದೆ ಜಾರಿ ಮಾಡಿ ನರೇಗಾವನ್ನು ಮಣ್ಣುಪಾಲು ಮಾಡುತ್ತಿದ್ದಾರೆ. ಬೇಸಿಗೆ ಕಾಲದಲ್ಲಿ ಬಡವರಿಗೆ ಬದುಕಾಗಿರುವ ಮನರೇಗಾ ಯೋಜನೆಯನ್ನು ಬದಲಿಸಿ, ಮೋದಿ ಬಡವರ ಹೊಟ್ಟೆ ಹೊಡೆಯುತ್ತಿದ್ದಾರೆ ಎಂದ ಅವರು, ಇದಕ್ಕೆ ಯಾವ ನಾಯಕರು ಧ್ವನಿ ಎತ್ತುತ್ತಿಲ್ಲ ಅಂದರೆ ಅವರಿಗೆ ಹೊಟ್ಟೆ ತುಂಬಿದೆ ಎನ್ನುವ ಅರ್ಥ ನೀಡುತ್ತದೆ ಎಂದರು.
ನರೇಗಾ ಉಳಿಸಲು ಯುದ್ಧಕ್ಕೂ ಸಿದ್ಧರಾಗಬೇಕು :
ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಬಡವರ ಸಬಲೀಕರಣಕ್ಕೆ ಮಾಜಿ ಪ್ರಧಾನಿ ದಿ.ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ ನರೇಗಾ ಜಾರಿಗೆ ಮಾಡಲಾಗಿತ್ತು. ಆದರೆ ಈಗ ಒಂದೊಂದಾಗಿ ಕಾನೂನುಗಳನ್ನು ಕಸಿದುಕೊಂಡು ತಿನ್ನುತ್ತಿದ್ದಾರೆ. ಇಂತಹ ವೇಳೆಯಲ್ಲಿ ನರೇಗಾ ಉಳಿಸಲು ಜನರು ಯುದ್ಧಕ್ಕೂ ಸಿದ್ಧರಾಗಬೇಕು ಎಂದು ಹೇಳಿದರು.
ಮೋದಿ , ಕೇಂದ್ರ ಹಾಗೂ ರಾಜ್ಯದ ನಡುವೆ 60: 40 ಅನುದಾನ ವಿಂಗಡಿಸಿದ್ದಾರೆ, ಇದು ಒಂದೇ ಮಾಡಿಲ್ಲ, ಸ್ಥಳೀಯ ವಿವಿಧ ಕೆಲಸಗಳಿಗೆ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಗೆ ಅಧಿಕಾರದ ಹಕ್ಕನ್ನು ಈಗ ಕೇಂದ್ರ ಸರ್ಕಾರಕ್ಕೆ ತೆಗೆದುಕೊಂಡಿದೆ, ದೆಹಲಿಯಿಂದ ಆದೇಶ ಮಾಡಿದರೆ ಮಾತ್ರ ಇಲ್ಲಿ ಯಾವ ಕೆಲಸ ಆಗಲಿವೆ. ಇಲ್ಲಿನ ಕೆಲಸಗಳು ಅವರಿಗೆ ಹೇಗೆ ಗೊತ್ತಾಗುತ್ತವೆ? ಎಂದು ಪ್ರಶ್ನಿಸಿದರು.
ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಕರನ್ನು ನೇಮಿಸಿ :
ಸಿದ್ದರಾಮಯ್ಯ ಅವರು ಕಾನ್ವೆಂಟ್ ಶಾಲೆಯಲ್ಲಿ ಓದಿಲ್ಲ, ಕನ್ನಡ ಶಾಲೆಯಲ್ಲಿ ಓದಿದ್ದಾರೆ, ಈಗ 2 ಬಾರಿ ಸಿಎಂ ಆಗಿದ್ದಾರೆ, ಹಾಗೇನೇ ನಮ್ಮ ಕಲ್ಯಾಣ ಕರ್ನಾಟಕದಲ್ಲಿ ಕೇವಲ ಶಾಲೆಗಳನ್ನು ಅಷ್ಟೇ ತೆರೆಯದೆ ಅವುಗಳಿಗೆ ಶಿಕ್ಷಕರನ್ನು ನೇಮಿಸಬೇಕು. ಅನೇಕ ಕಡೆಗಳಲ್ಲಿ ಶಿಕ್ಷಕರ ಕೊರತೆ ಇವೆ, ಎಲ್ಲಿಯವರೆಗೆ ಶಿಕ್ಷಕರ ಕೊರತೆ ತುಂಬುವುದಿಲ್ಲವೊ ಅಲ್ಲಿಯವರೆಗೆ ಅಭಿವೃದ್ಧಿ ಆಗುವುದಿಲ್ಲ.
-ಡಾ. ಮಲ್ಲಿಕಾರ್ಜುನ್ ಖರ್ಗೆ (ಎಐಸಿಸಿ ಅಧ್ಯಕ್ಷರು)