×
Ad

ಸಂಗೀತದಿಂದ ಮಾನಸಿಕ ನೆಮ್ಮದಿ ಹೆಚ್ಚುತ್ತದೆ: ನಮೋಶಿ

Update: 2025-01-18 08:54 IST

ಕಲಬುರಗಿ: ನಿರಂತರವಾಗಿ ಸಂಗೀತವನ್ನು ಆಲಿಸುವುದರಿಂದ ಮಾನಸಿಕ ನೆಮ್ಮದಿ ಹೆಚ್ಚಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಶಶಿಲ್ ಜಿ. ನಮೋಶಿ ಹೇಳಿದರು. ಕಲಬುರ್ಗಿ ನಗರದ ಕಲಾಮಂಡಳದಲ್ಲಿ ಪ್ರೀತಿ ಗಾನ ಲಹರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸೇವಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯ ದಲ್ಲಿ ಏರ್ಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮುಂದುವರೆದು ಮಾತನಾಡಿದ ಶಶಿಲ್ ಜಿ ನಮೋಶಿಯವರು, ಇಂದಿನ ಯುವಕರು ಪಶ್ಚಿಮಾತ್ಯ ಸಂಗೀತಕ್ಕೆ ಮಾರುಹೋಗದೆ, ಸುಮಧುರ ಗೀತೆಗಳನ್ನು ಆಲಿಸುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾಸ್ಟರ್ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್ ನಿರಗುಡಿ ಅವರು, ಖಾಸಗಿ ಸಂಸ್ಥೆಗಳು ಕೊಡುವ ಪ್ರಶಸ್ತಿಗಳಿಂದ ಸಾಮಾಜಿಕ ಜವಾಬ್ದಾರಿ ಹೆಚ್ಚಾಗುತ್ತದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹಿರಿಯ ಸಾಹಿತಿಗಳಾದ ಡಾ. ನೀಲಾಂಬಿಕಾ ಶೇರಿಕಾರ ಅವರು, ಶರಣರ ನಾಡಿನಲ್ಲಿ ಸಂಗೀತ ಸೇವೆ ಅತ್ಯಮೂಲ್ಯವಾಗಿದೆ. ಕನ್ನಡ ಭಾಷೆಯಲ್ಲಿ ಬರುವ ಸಂಗೀತದ ಕಾರ್ಯಕ್ರಮಗಳು ನಾಡಿನ ಶ್ರೇಷ್ಠತೆಯನ್ನು ಎತ್ತಿ ಹಿಡಿಯುತ್ತವೆ ಎಂದು ಹೇಳಿದರು.

ಕಾರ್ಯಕ್ರಮದ ಆರಂಭಕ್ಕೆ ಪ್ರೀತಿ ಗಾನ ಲಹರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಮಂಗಲಾ ಕಪರೆಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಲ್ಯಾಣ ನಾಡಿನಿಂದ ಹೊರಹೊಮ್ಮುವ ವಚನ ಸಾಹಿತ್ಯ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

 

ಇದೇ ಸಂದರ್ಭದಲ್ಲಿ ಕ್ಯಾಪ್ಟನ್ ಮಹೇಂದ್ರಕುಮಾರ ಎಸ್. ರಾವೂರ ಹಾಗೂ ಡಾ. ಪ್ರೇಮಾ ಬದಾಮಿ ಅವರಿಗೆ ದಿವಂಗತ ಗುರಯ್ಯ ಸ್ವಾಮಿ ಮಾಸ್ಟರ್ ಅವರ ಸ್ಮರಣಾರ್ಥ ಮಾಸ್ಟರ್ ಪ್ರಶಸ್ತಿಯನ್ನು ವಿತರಿಸಲಾಯಿತು.

ಕಾರ್ಯಕ್ರಮದ ವೇದಿಕೆ ಮೇಲೆ ಆಸೀನರಾಗಿದ್ದ ಗುಲ್ಬರ್ಗ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಮಲ್ಲಣ್ಣ ಮಡಿವಾಳ್ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ್ ಬಡಿಗೇರವರು ಕಾರ್ಯಕ್ರಮವನ್ನು ಉದ್ದೇಶಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ವೇದಿಕೆಯ ಮೇಲೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರಿನ ಪ್ರಾದೇಶಿಕ ನಿರ್ದೇಶಕ ಡಾ. ಸಂಗಮೇಶ ಎಸ್ ಹಿರೇಮಠ್ ಕಲ್ಬುರ್ಗಿ ಅಭಿವೃದ್ಧಿ ಪರ ಸಮಿತಿಯ ಅಧ್ಯಕ್ಷ ಲೂಯಿಸ ಕೊರಿ ಹಿರಿಯ ಸಾಹಿತಿಗಳಾದ ಶಾಂತಾ ಪಸ್ತಾಪೂರ ಸಮಾಜ ಚಿಂತಕ ಚಂದ್ರಶೇಖರ ಮಡಿವಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ನಂತರ ಕಾರ್ಯಕ್ರಮದ ವೇದಿಕೆ ಮೇಲೆ ಕವಿಗೋಷ್ಠಿ ಮತ್ತು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು ಕಾರ್ಯಕ್ರಮವನ್ನು ಹಿರಿಯ ಸಾಹಿತಿಗಳಾಗಿರುವ ಗಂಗಮ್ಮ ಆರ್ ನಾಲವಾರ ಅವರು ನಿರೂಪಿಸಿದರು. ಕಾರ್ಯಕ್ರಮದಲ್ಲಿ ವೆಂಕಟೇಶ ಕಪರೆ, ಶಾಮಲಾ ಕುಲಕರ್ಣಿ, ರೇಣುಕಾ ಮಠಪತಿ ಜ್ಯೋತಿ ಮಠಪತಿ ಯಶೋಧಾ ಕಟಕೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News