×
Ad

ಕೇಂದ್ರ ಬಜೆಟ್‌ನಲ್ಲಿ ಕಲಬುರಗಿಯ ಬೇಡಿಕೆಗಳ ಈಡೇರಿಕೆಗೆ ಮುತ್ತಣ್ಣ ಎಸ್.ನಡಗೇರಿ ಆಗ್ರಹ

"ಕೇಂದ್ರ ಸರಕಾರವು ಕಲ್ಯಾಣ ಕರ್ನಾಟಕ ಭಾಗದ ಮೇಲೆ ಮಲತಾಯಿ ಧೋರಣೆ ತೋರಿಸುತ್ತಿದೆ"

Update: 2026-01-16 19:38 IST

ಕಲಬುರಗಿ : ಕೇಂದ್ರ ಸರ್ಕಾರದ ಮುಂದಿನ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕ ಹಾಗೂ ಕಲಬುರಗಿ ಜಿಲ್ಲೆಯ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕಲ್ಯಾಣ ನಾಡು ವಿಕಾಸ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಣ್ಣ ಎಸ್.ನಡಗೇರಿ ಒತ್ತಾಯಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹನ್ನೊಂದು ವರ್ಷಗಳಿಂದ ಕೇಂದ್ರ ಸರ್ಕಾರವು ಕಲ್ಯಾಣ ಕರ್ನಾಟಕ ಭಾಗದ ಮೇಲೆ ಮಲತಾಯಿ ಧೋರಣೆ ತೋರಿಸುತ್ತಿದ್ದು, ವಿಶೇಷವಾಗಿ ಕಲಬುರಗಿ ಜಿಲ್ಲೆಗೆ ಅಭಿವೃದ್ಧಿ ವಿಷಯದಲ್ಲಿ ಅನ್ಯಾಯವಾಗಿದೆ. ಇನ್ನೂ ಮುಂದಾದರೂ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ನೀಡುವ ಮೂಲಕ ಕಲಬುರಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಕಲಬುರಗಿಯು ಅಭಿವೃದ್ಧಿ, ಹೊಸ ಯೋಜನೆಗಳ ಘೋಷಣೆಗಳ ವಿಷಯಗಳಲ್ಲಿ ಅತೀ ಹಿಂದುಳಿದಿದೆ, ಇಲ್ಲಿ "ಸಬ್ ಕಾ ಸಾಥ್, ಕೇವಲ ಕಲಬುರಗಿ ಕಾ ಬರ್ಬಾದ್" ಎನ್ನುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಲಬುರಗಿ ಜಿಲ್ಲೆಯ ಇಎಸ್‌ಐಸಿ ಆಸ್ಪತ್ರೆಯನ್ನು ಏಮ್ಸ್ (AIIMS) ಆಗಿ ಮೇಲ್ದರ್ಜೆಗೆ ಏರಿಸಬೇಕು ಎನ್ನುವುದು ಪ್ರಮುಖ ಬೇಡಿಕೆಯಾಗಿದೆ. 2018ರ ಪಾರ್ಲಿಮೆಂಟರಿ ಅಕೌಂಟ್ಸ್ ಕಮಿಟಿ ವರದಿ, 2020ರ ಮದ್ರಾಸ್ ಹೈಕೋರ್ಟ್ ತೀರ್ಪು ಹಾಗೂ ನಂಜುಂಡಪ್ಪ ಸಮಿತಿ ಶಿಫಾರಸ್ಸಿನಂತೆ ಹಿಂದುಳಿದ ಪ್ರದೇಶವಾದ ಕಲಬುರಗಿಯಲ್ಲಿ ಏಮ್ಸ್ ಸ್ಥಾಪನೆ ಅಗತ್ಯವಿದೆ ಎಂದು ತಿಳಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 2020ರಲ್ಲಿ ಈ ಕುರಿತು ಕೇಂದ್ರಕ್ಕೆ ಪತ್ರ ಬರೆದಿದ್ದರೂ ಇದುವರೆಗೂ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸೇಡಂ ರಸ್ತೆಯಲ್ಲಿರುವ ಇಎಸ್‌ಐಸಿ ಆಸ್ಪತ್ರೆ ಸಂಕೀರ್ಣದಲ್ಲಿ ಈಗಾಗಲೇ ಸುಸಜ್ಜಿತ ಆಸ್ಪತ್ರೆ, ವೈದ್ಯಕೀಯ, ಪ್ಯಾರಾಮೆಡಿಕಲ್, ಡೆಂಟಲ್ ಮತ್ತು ನರ್ಸಿಂಗ್ ಕಾಲೇಜುಗಳು ಇದ್ದು, ಹೆಚ್ಚುವರಿ ಭೂಮಿಯೂ ಲಭ್ಯವಿದೆ. ಈಗಿರುವ ಮೂಲಸೌಕರ್ಯವನ್ನು ಏಮ್ಸ್ ಆಗಿ ಮೇಲ್ದರ್ಜೆಗೆ ಏರಿಸಿದರೆ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಗುವುದಿಲ್ಲ ಎಂದು ಅವರು ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಲ್ಲೂ ಕಲಬುರಗಿ ಜಿಲ್ಲೆ ಕಡೆಗಣಿಸಲಾಗಿದೆ ಎಂದು ಆರೋಪಿಸಿದ ಅವರು, ಬೀದರ್–ಕಲಬುರಗಿ–ವಿಜಯಪುರ ರಾಷ್ಟ್ರೀಯ ಹೆದ್ದಾರಿ 50, ಕಲಬುರಗಿ–ರಾಯಚೂರು ರಾಷ್ಟ್ರೀಯ ಹೆದ್ದಾರಿ 150 ಸೇರಿದಂತೆ ಪ್ರಮುಖ ಮಾರ್ಗಗಳನ್ನು ನಾಲ್ಕು ಪಥದ ಹೆದ್ದಾರಿಗಳಾಗಿ ಅಭಿವೃದ್ಧಿಪಡಿಸಬೇಕು ಎಂದು ಬೇಡಿಕೆ ಇಟ್ಟಿರುವ ಮುತ್ತಣ್ಣ ಅವರು, ಕಲಬುರಗಿ ನಗರಕ್ಕೆ ಎರಡನೇ ವರ್ತುಲ ರಸ್ತೆ ನಿರ್ಮಾಣಕ್ಕೂ ಒತ್ತಾಯಿಸಿದರು.

ರೈಲು ಸೇವೆಗಳ ಕುರಿತು ಮಾತನಾಡಿದ ಅವರು, 2014ರಲ್ಲಿ ಶಂಕುಸ್ಥಾಪನೆಯಾಗಿರುವ ಕಲಬುರಗಿ ರೈಲ್ವೆ ವಿಭಾಗವನ್ನು ತಕ್ಷಣ ಆರಂಭಿಸಬೇಕು ಎಂದು ಆಗ್ರಹಿಸಿದರು. ಕಲಬುರಗಿ–ಲಾತೂರ ಹೊಸ ರೈಲು ಮಾರ್ಗಕ್ಕೆ ಅನುದಾನ ನೀಡಬೇಕು ಹಾಗೂ ಕಲಬುರಗಿಯಿಂದ ಬೆಂಗಳೂರು–ಮೈಸೂರು ಮತ್ತು ಮಂಗಳೂರು ಮಾರ್ಗಗಳಿಗೆ ಹೊಸ ರೈಲು ಸೇವೆ ಆರಂಭಿಸಬೇಕೆಂದು ಹೇಳಿದರು.

ಇದೇ ವೇಳೆ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಉಡಾನ್ ಯೋಜನೆಯಡಿ ವಿಮಾನ ಸೇವೆಗಳನ್ನು ಪುನರಾರಂಭಿಸಿ ಕನಿಷ್ಠ ಹತ್ತು ವರ್ಷಗಳ ಕಾಲ ವಿಸ್ತರಣೆ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ರಾಜ್ಯ ಸರ್ಕಾರವು ಕೇಂದ್ರ ಬಜೆಟ್ ಮಂಡನೆಗೂ ಮುನ್ನ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ವಿಶೇಷ ಅನುದಾನ ಕೇಳಲು ನಿಯೋಗವನ್ನು ಕೇಂದ್ರಕ್ಕೆ ಕಳುಹಿಸಬೇಕು. ಈ ನಿಯೋಗದಲ್ಲಿ ಕಲಬುರಗಿ ಜಿಲ್ಲೆಯ ಏಮ್ಸ್, ಹೆದ್ದಾರಿ, ರೈಲ್ವೆ ವಿಭಾಗ ಸೇರಿದಂತೆ ಸಮಗ್ರ ಅಭಿವೃದ್ಧಿ ವಿಷಯಗಳನ್ನು ಮುಂದಿಟ್ಟು ಮಾತುಕತೆ ನಡೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಬಾಬು ಮದನಕರ, ಸಂಘಟಕರಾದ ಜೈಭೀಮ್ ಮಾಳಗೆ, ಮೋಹನ ಸಾಗರ, ನಾಗು ಡೊಂಗರಗಾಂವ್ ಹಾಗೂ ದತ್ತು ಜಮಾದಾರ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News