ಚಿತ್ತಾಪುರ | ಜ.21ರಂದು ಅಂಬಿಗರ ಚೌಡಯ್ಯ ಜಯಂತಿ ಆಚರಣೆ
ಸರಕಾರದ ಶಿಷ್ಟಾಚಾರದಂತೆ ಅಂಬಿಗರ ಚೌಡಯ್ಯ ಜಯಂತಿ ಯಶಸ್ವಿಗೊಳಿಸಿ: ಭೀಮಣ್ಣ ಸಾಲಿ
ಚಿತ್ತಾಪುರ: ತಾಲೂಕು ಆಡಳಿತದ ವತಿಯಿಂದ ಜ.21ರಂದು ಹಮ್ಮಿಕೊಳ್ಳಲಾಗುವ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮವನ್ನು ಸರ್ಕಾರದ ಶಿಷ್ಟಾಚಾರದಂತೆ ಯಾವುದೇ ಲೋಪವಾಗದಂತೆ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ ತಿಳಿಸಿದರು.
ಪಟ್ಟಣದ ಪ್ರಜಾ ಸೌಧದ ಸಭಾಂಗಣದಲ್ಲಿ ಜರುಗಿದ ಜಯಂತಿ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಈ ಬಾರಿ ಸಮಾಜದ ಮುಖಂಡರೆಲ್ಲರೂ ಒಗ್ಗೂಡಿ ಜಯಂತಿ ಆಚರಿಸಲು ನಿರ್ಧರಿಸಿದ್ದು, ಆಮಂತ್ರಣ ಪತ್ರಿಕೆಯಲ್ಲಿ ಸಮಾಜದ ಮುಖಂಡರ ಹೆಸರುಗಳನ್ನು ಒಳಗೊಳ್ಳುವಂತೆ ಮನವಿ ಮಾಡಿದರು.
ಯುವ ಮುಖಂಡ ಶಿವಕುಮಾರ ಸುಣಗಾರ ಮಾತನಾಡಿ, ಅಂಗನವಾಡಿ ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಜಯಂತಿ ಆಚರಣೆಯನ್ನು ನಿರ್ಲಕ್ಷಿಸಲಾಗುತ್ತಿದೆ. ತಾಲೂಕು ಮಟ್ಟದ ಅಧಿಕಾರಿಗಳು ಎಲ್ಲಾ ಇಲಾಖೆಗಳಲ್ಲಿ ಜಯಂತಿ ಆಚರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.
ಮಲ್ಲಿಕಾರ್ಜುನ ಅಲ್ಲೂರಕರ್ ಮಾತನಾಡಿ, ಕಳೆದ ವರ್ಷದ ಲೋಪದೋಷಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದರು.
ತಹಶೀಲ್ದಾರ್ ನಾಗಯ್ಯ ಹಿರೇಮಠ ಮಾತನಾಡಿ, ಸಮಾಜದ ಮುಖಂಡರ ಸಲಹೆಗಳನ್ನು ಸ್ವೀಕರಿಸಲಾಗಿದ್ದು, ಜ. 21ರಂದು ಬೆಳಿಗ್ಗೆ 10 ಗಂಟೆಗೆ ಪ್ರಜಾ ಸೌಧದ ಆವರಣದಲ್ಲಿ ತಾಲೂಕು ಮಟ್ಟದ ಜಯಂತಿ ಕಾರ್ಯಕ್ರಮ ನಡೆಯಲಿದೆ. ಅಂದು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಭಾವಚಿತ್ರ ಪೂಜೆ ನೆರವೇರಿಸಿ, ಮುಖ್ಯ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮುಹಮ್ಮದ್ ಅಕ್ರಂ ಪಾಷಾ, ಗ್ರೇಡ್ 2 ತಹಶೀಲ್ದಾರ್ ರಾಜಕುಮಾರ್ ಮರತೂರಕರ್, ಪಿಎಸ್‌ಐ ಮಂಜುನಾಥ ರೆಡ್ಡಿ, ಪಶು ವೈದ್ಯಾಧಿಕಾರಿ ಡಾ.ಶಂಕರ ಕಣ್ಣಿ, ಕೋಲಿ ಸಮಾಜದ ತಾಲೂಕು ಅಧ್ಯಕ್ಷರಾದ ಶಿವುಕುಮಾರ ಯಾಗಾಪೂರ, ನಿಂಗಣ್ಣ ಹೆಗಲೇರಿ, ತಾಲೂಕು ಯುವ ಅಧ್ಯಕ್ಷ ರಾಜೇಶ್ ಹೊಳಿಕಟ್ಟಿ, ಮುಖಂಡರಾದ ಭೀಮಣ್ಣ ಸೀಬಾ, ಸಂತೋಷ ಇವಣಿ, ರಾಮಲಿಂಗ ಬಾನರ್, ಕಾಶಪ್ಪ ಡೋಣಗಾಂವ, ಜೈಗಂಗಾ ವಾಡಿ, ತಮ್ಮಣ್ಣ ಡಿಗ್ಗಿ, ಶರಣಪ್ಪ ನಾಟೀಕಾರ, ಬಸವರಾಜ ಚಿನ್ನಮಳ್ಳಿ, ದಶರಥ ದೊಡ್ಡಮನಿ, ಶರಣು ಅರಣಕಲ್, ಭಾಗಣ್ಣ ಹಲಕಟ್ಟಿ, ಸಾಬಣ್ಣ ಡಿಗ್ಗಿ, ಅರುಣ ಯಾಗಾಪೂರ, ಸಾಬಣ್ಣ ಭರಾಟೆ, ಮದನ್ ಯಾಗಾಪೂರ, ಆನಂದ್ ಯರಗಲ್, ಮಲ್ಲಿಕಾರ್ಜುನ ಸಂಗಾವಿ, ನಾಗರಾಜ ಸಂಗಾವಿ ಸೇರಿದಂತೆ ಇತರರು ಇದ್ದರು.