×
Ad

ಕಲಬುರಗಿ | ಕೆಕೆಆರ್‌ಡಿಬಿ ಮಂಡಳಿ ಕಾರ್ಯದರ್ಶಿಯಾಗಿ ನಳಿನ್ ಅತುಲ್ ಅಧಿಕಾರ ಸ್ವೀಕಾರ

Update: 2025-06-19 21:52 IST

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ನೂತನ ಕಾರ್ಯದರ್ಶಿಯಾಗಿ 2014ರ ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿ ನಳಿನ್ ಅತುಲ್ ಗುರುವಾರ ಅಧಿಕಾರ ಸ್ವೀಕರಿಸಿದರು.

ಈ ಮೊದಲು ಮಂಡಳಿಯ ಕಾರ್ಯದರ್ಶಿಯಾಗಿದ್ದ ಐಎಎಸ್ ಅಧಿಕಾರಿ ಎಂ.ಸುಂದರೇಶ ಬಾಬು ಅವರನ್ನು ಕೇಂದ್ರ ಸರಕಾರಿ ಸೇವೆಗೆ ನಿಯೋಜನೆ ಮಾಡಿದ್ದರಿಂದ ಅವರಿಂದ ತೆರವಾದ ಸ್ಥಾನಕ್ಕೆ ಕೊಪ್ಪಳ ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ನಳಿನ್ ಅತುಲ್ ಅವರನ್ನು ಸರಕಾರ ವರ್ಗಾಯಿಸಿತ್ತು.

ಮೂಲತ ಬಿಹಾರ ರಾಜ್ಯದವರಾಗಿರುವ ನಳಿನ್ ಅತುಲ್ ಬಿಟೆಕ್ ಪದವೀಧರರಾಗಿದ್ದಾರೆ. ರಾಯಚೂರು ಜಿಲ್ಲಾ ಪಂಚಾಯತ್ ಸಿಇಒ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮುಖ್ಯಸ್ಥರಾಗಿ, ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಇದಲ್ಲದೆ ಕಲಬುರಗಿಯಲ್ಲಿ 2019ರ ಅಕ್ಟೋಬರ್ 22 ರಿಂದ 2022ರ ಜನವರಿ 27ರವರೆಗೆ ಶಾಲಾ ಶಿಕ್ಷಣ ಇಲಾಖೆಯ ಅಪರ ಅಯುಕ್ತರಾಗಿ ಕಾರ್ಯ ನಿರ್ವಹಿಸಿದ್ದಾರೆ.  

ಕೆಕೆಆರ್‌ಡಿಬಿ ಮಂಡಳಿ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕಾರದ ಬಳಿಕ ಮಾತನಾಡಿದ ನಳಿನ್ ಅತುಲ್, ಮಂಡಳಿಯ ಅಧ್ಯಕ್ಷರು, ಸರ್ವ ಸದಸ್ಯರ ಸಲಹೆ ಹಾಗೂ ಪ್ರದೇಶದ ಏಳು ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಒ ಅವರ ಅಭಿಪ್ರಾಯ ಪಡೆದು ರಾಜ್ಯ ಸರಕಾರಿ ಮಂಡಳಿಗೆ ಒದಗಿಸಿರುವ ಅನುದಾನವನ್ನು ಪ್ರದೇಶದ ಒಳಿತಿಗೆ ಸಮರ್ಪಕವಾಗಿ ಅನುಷ್ಠಾನ ಮಾಡುವುದರ ಜೊತೆಗೆ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು. 

ಈ ಸಂದರ್ಭದಲ್ಲಿ ಮಂಡಳಿ ಉಪ ಕಾರ್ಯದರ್ಶಿ ಮಂಜುನಾಥ ಸ್ವಾಮಿ ಜಿ.ಎನ್, ಅಪರ ನಿರ್ದೇಶಕಿ ಪ್ರವೀಣಪ್ರಿಯಾ ಡೇವಿಡ್, ವಿಜಯಕುಮಾರ ಪಾಟೀಲ, ಅಕ್ಕನಾಗಮ್ಮ, ಪ್ರಕಾಶ ಕುದರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News