×
Ad

ಕಲಬುರಗಿ| ಹೋರಾಟಗಾರರ ವಿರುದ್ಧ ಹಲ್ಲೆ ಪ್ರಕರಣ ಮುಚ್ಚಿಹಾಕಲು ಸರಕಾರ ಯತ್ನ: ಜಯ ಮೃತ್ಯುಂಜಯ ಸ್ವಾಮೀಜಿ ಆರೋಪ

Update: 2025-06-07 14:51 IST

ಕಲಬುರಗಿ: ಬೆಳಗಾವಿಯಲ್ಲಿ ಮೀಸಲಾತಿ ನೀಡುವಂತೆ ನಡೆಸಿದ ಹೋರಾಟದ ಸಂದರ್ಭದಲ್ಲಿ ದೀಕ್ಷ ಪಂಚಮಸಾಲಿ ಹೋರಾಟಗಾರರ ಮೇಲೆ ಪೊಲೀಸರು ನಡೆಸಿದ ಮಾರಣಾಂತಿಕ ಹಲ್ಲೆಯ ಪ್ರಕರಣವನ್ನು ಸರಕಾರ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ ಎಂದು ಪಂಚಮಸಾಲಿ ಮೀಸಲಾತಿ ಹೋರಾಟದ ನಾಯಕತ್ವ ವಹಿಸಿರುವ ಜಯ ಮೃತ್ಯುಂಜಯ ಸ್ವಾಮೀಜಿ ಆರೋಪಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಘಟನೆ ಕುರಿತು ನಾವು ನ್ಯಾಯಾಲಯದ ಮೊರೆ ಹೋಗಿದ್ದೆವು. ನ್ಯಾಯಾಲಯವೂ ಈ ಹಲ್ಲೆ ತಪ್ಪಾಗಿದೆ ಎಂದು ಸ್ಪಷ್ಟ ಹೇಳಿತ್ತು, ನ್ಯಾಯಾಲಯ ನಿವೃತ್ತ ನ್ಯಾಯಮೂರ್ತಿಯ ನೇತೃತ್ವದಲ್ಲಿ ತನಿಖೆ ನಡೆಸಲು ಸರ್ಕಾರಕ್ಕೆ ಆದೇಶ ನೀಡಿತ್ತು. ಆದರೆ ಸರ್ಕಾರ ಈ ತನಿಖೆಯನ್ನು ಇಂದಿಗೂ ಪ್ರಾರಂಭಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.

ಈ ಸರ್ಕಾರದಲ್ಲಿ ಲಿಂಗಾಯಿತ ಶಾಸಕರಿಗೆ ಬೇಕಾದ ಮಟ್ಟದ ಗೌರವವಿಲ್ಲ. ಶಾಮನೂರು ಶಿವಶಂಕರಪ್ಪ ಅವರು ಕೂಡಾ ಮನವಿ ಮಾಡಿದ್ರು, ಆದರೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು.

ಈ ಸರಕಾರದಲ್ಲಿ ಲಿಂಗಾಯತ ಶಾಸಕರ ಧ್ವನಿಗೆ ಬೆಲೆನೆ ಇಲ್ಲ. ಲಿಂಗಾಯತ ಶಾಸಕರ ಮಾತನ್ನು ಎಷ್ಟರ ಮಟ್ಟಿಗೆ ಕೇಳುತ್ತದೆ ಎಂಬುವುದನ್ನು ನಂಬಿಕೆನೇ ಇಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಸರಕಾರ ಹೈಕೋರ್ಟ್ ಆದೇಶವನ್ನೇ ಉಲ್ಲಂಘಿಸೋ ನಿರ್ಧಾರದಲ್ಲಿದೆ ಎಂದ ಅವರು, ಘಟನೆ ಕುರಿತಂತೆ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿಯ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡುವಂತೆ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಪಂಚ ಸೇನೆ ಜಿಲ್ಲಾಧ್ಯಕ್ಷ ಸೋಮಶಂಕರ ಮೂಲಗೆ, ದೀಕ್ಷ ಸಮಾಜದ ಜಿಲ್ಲಾಧ್ಯಕ್ಷ ಶರಣಬಸಪ್ಪ ಪಪ್ಪಾ, ರವೀಂದ್ರ ಬಬಲೇಶ್ವರ, ಸಂಜೀವಕುಮಾರ ಸುಗುರೆ, ಮಲ್ಲಣ್ಣಗೌಡ ಪಾಟೀಲ್, ರಮೇಶ್ ಬಿರಾದರ್ ಸೇರಿದಂತೆ ಇನ್ನಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News