×
Ad

ಮನ್ ಕೀ ಬಾತ್‌ನಲ್ಲಿ ʼಕಲಬುರಗಿ ಖಡಕ್ ರೊಟ್ಟಿʼ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ: ಶಶೀಲ್ ನಮೋಶಿ ಹರ್ಷ

Update: 2025-06-29 17:26 IST

ಕಲಬುರಗಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ 123ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲೆಯ ಜೋಳದ ರೊಟ್ಟಿಯ ಮಹತ್ವ ಕುರಿತು ಪ್ರಸ್ತಾಪಿಸುವ ಮೂಲಕ ಸಿರಿಧಾನ್ಯಗಳ ಪೈಕಿ ಒಂದಾಗಿರುವ ಜೋಳಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಸೃಷ್ಟಿಯಾಗುವಂತೆ ಮಾಡಿರುವುದು ನಿಜಕ್ಕೂ ಹೆಮ್ಮೆ ತರುವಂತಿದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಹರ್ಷ ವ್ಯಕ್ತಪಡಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಮಹಿಳೆಯರು ಸ್ವಸಹಾಯ ಸಂಘ ರಚಿಸಿಕೊಂಡು ಆ ಮೂಲಕ ನಿತ್ಯ 3,000 ಜೋಳದ ರೊಟ್ಟಿಗಳನ್ನು ಸಿದ್ದಪಡಿಸಿ ಬೆಂಗಳೂರಿನಲ್ಲಿ ಮಾರುಕಟ್ಟೆ ಮಾಡುತ್ತಿರುವುದರ ಬಗ್ಗೆ ಪ್ರಧಾನಿಗಳು ಉಲ್ಲೇಖಿಸುವ ಮೂಲಕ ತಮ್ಮ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸ್ತ್ರೀ ಸಬಲೀಕರಣದ ಕುರಿತು ಹೆಚ್ಚು ಕಾಳಜಿಯಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದರು.

ಜೋಳದ ರೊಟ್ಟಿಯ ಮಾತಿಗೆ ಬರುವುದಾದರೆ, ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ಜೋಳದಲ್ಲಿ ಯಥೇಚ್ಛವಾಗಿ ನಾರಿನ ಅಂಶ (ಫೈಬರ್) ಇರುವುದರಿಂದ ಸುಲಭವಾಗಿ ಜೀರ್ಣಗೊಳ್ಳುವ ಆಹಾರವಾಗಿದ್ದು, ಕರುಳಿನ ಆರೋಗ್ಯಕ್ಕೆ ಪೂರಕವಾಗಿದೆ. ಮೇಲಾಗಿ, ದೇಹದಲ್ಲಿ ಸಕ್ಕರೆ ಅಂಶವು ಸಮತೋಲನ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳುತ್ತದೆ. ಇದರ ಜೊತೆಗೆ, ಮೆಗ್ನಿಷಿಯಂ, ಕ್ಯಾಲ್ಸಿಯಂ ಹಾಗೂ ಅಗತ್ಯ ಖನಿಜಾಂಶಗಳು ಇರುವುದರಿಂದ ಮೂಳೆಗಳ ಆರೋಗ್ಯಕ್ಕೂ ಜೋಳದ ರೊಟ್ಟಿ ಸಹಕಾರಿಯಾಗಿದೆ ಎಂಬುದು ಈಗಾಗಲೇ ಸಾಬೀತಾಗಿದೆ ಎಂದರು.

ಈ ಕಾರಣಕ್ಕಾಗಿಯೇ ಬೆಂಗಳೂರಿನಲ್ಲಿ ಜೋಳದ ರೊಟ್ಟಿಯ ಕೌಂಟರ್ ಆರಂಭಿಸುವ ಮೂಲಕ ‘ಸಿರಿಧಾನ್ಯದ ಶಕ್ತಿ’ಯ ಮಹತ್ವ ಸಾಬೀತುಪಡಿಸಿರುವ ನಮ್ಮ ಮಹಿಳೆಯರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಮನಃಪೂರ್ವಕವಾಗಿ ಅಭಿನಂದಿಸಿದ್ದಾರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News