ಭಾಷೆ, ಬಡತನ ಸಾಧನೆಗೆ ಅಡ್ಡಿಯಲ್ಲ: ಡಾ. ವಿಕ್ರಮ ವಿಸಾಜಿ
ಕಲಬುರಗಿ: "ಭಾಷೆ ಮತ್ತು ಬಡತನವು ಸಾಧನೆಗೆ ಅಡ್ಡಿಯಾಗಲಾರವು. ಛಲ ಮತ್ತು ಧೈರ್ಯದಿಂದ ಕೆಲಸವನ್ನು ಬಿಡದೆ ಮಾಡಿದರೆ ಯಶಸ್ಸು ಖಂಡಿತವಾಗಿ ಸಿಗುತ್ತದೆ" ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ವಿಕ್ರಮ ವಿಸಾಜಿ ಅವರು ಹೇಳಿದರು.
ಆಳಂದ ಪಟ್ಟಣದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎ.ವಿ. ಪಾಟೀಲ್ ಪದವಿ ಮಹಾವಿದ್ಯಾಲಯದಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಭಾಷಣವನ್ನು ನೀಡಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ವಿಯಾಗಲು ಒಳ್ಳೆಯ ಮಾರ್ಗದರ್ಶನದ ಜೊತೆಗೆ ಬೆಳೆಯಬೇಕೆಂಬ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯ ಡಾ. ಎಚ್.ಎಸ್. ಹೊಸಮನಿ ಅವರು ಮಾತನಾಡಿ, "ವಿದ್ಯಾರ್ಥಿಗಳು ಪ್ರಾಮಾಣಿಕತೆಯಿಂದ ಅಧ್ಯಯನ ಮಾಡಿ ಕಾಲೇಜು, ತಂದೆ-ತಾಯಿ ಮತ್ತು ಸಮಾಜಕ್ಕೆ ಕೀರ್ತಿಯನ್ನು ತರಬೇಕು. ಜೀವನದಲ್ಲಿ ಶಿಸ್ತನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು" ಎಂದು ಒತ್ತಿ ಹೇಳಿದರು.
ವಾರ್ಷಿಕ ವರದಿಯನ್ನು ಉಪನ್ಯಾಸಕ ಪ್ರಮೋದ ಡಿ.ಸಿ. ಅವರು ಓದಿದರು, ವರ್ಷದ ಚಟುವಟಿಕೆಗಳು ಮತ್ತು ಸಾಧನೆಗಳನ್ನು ವಿವರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆ ಮತ್ತು ಕ್ರೀಡೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಸನ್ಮಾನಿಸಲಾಯಿತು. ಅತಿ ಹೆಚ್ಚು ಅಂಕಗಳನ್ನು ಗಳಿಸಿ ಕಾಲೇಜಿಗೆ ಕೀರ್ತಿಯನ್ನು ತಂದ ವಿದ್ಯಾರ್ಥಿಗಳನ್ನು ವಿಶೇಷವಾಗಿ ಈ ಸಂದರ್ಭಧಲ್ಲಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಪ್ರಾಧ್ಯಾಪಕರಾದ ಡಾ. ರಾಜಶೇಖರ್ ಬಾಬನೂರ್, ಡಾ. ರಮೇಶ್ ಮಶರಬು, ಡಾ. ಟೀಕಪ್ಪಾ, ಡಾ. ಜಯಪ್ರಕಾಶ್ ಭಾವಿಮನಿ, ಶರಣಬಸಪ್ಪ ಕಮ್ಮಾರ, ಡಾ. ಸುಖದೇವಿ ಘಂಟೆ, ಬಸವರಾಜ ಶೃಂಗೇರಿ, ಸಂಗಮೇಶ ಸ್ವಾಮಿ, ಅಂಬರೀಶ್ ಎಂ., ಬಿ.ಜಿ. ಬನಸೋಡೆ, ವಿಜಯಕುಮಾರ ಎಸ್., ನಿಜಾಮುದ್ದೀನ್, ಬಸವರಾಜ ಪಾಟೀಲ್, ದಿನೇಶ್ ಪಾಟೀಲ್, ಸತೀಶ್ ಪಾಟೀಲ್, ವರುಣ್ ನಂದಿ ಕೊಲೆ, ಮಲ್ಲಿಕಾರ್ಜುನ್ ಚಿತ್ಕೋಟಿ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವು ಸಂಗೀತಾ ಅಷ್ಟಗಿ ಮತ್ತು ಬಸಮ್ಮ ಪಾಟೀಲ್ ಅವರಿಂದ ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾಯಿತು. ಡಾ. ವೆಂಕಟೇಶ ಪೂಜಾರ ನಿರೂಪಿಸಿದರು, ಡಾ. ಬಬ್ರುವಾಹನ ಸ್ವಾಗತಿಸಿದರು. ಡಾ. ಜಯಪ್ರಕಾಶ ಭಾವಿಮನಿ ವಂದಿಸಿದರು.