×
Ad

ಕಲಬುರಗಿಯಲ್ಲಿ ಮುಖ್ಯಮಂತ್ರಿಯಿಂದ ಪ್ರಾದೇಶಿಕ ಮಟ್ಟದ ಬರ ಪರಿಸ್ಥಿತಿ ಅವಲೋಕನ ಸಭೆ: ಪ್ರಿಯಾಂಕ್ ಖರ್ಗೆ

Update: 2026-07-06 15:17 IST

ಕಲಬುರಗಿ: ಹೊಸ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಲಬುರಗಿ ಆಗಮಿಸುತ್ತಿದ್ದು, ಬರ ಪರಿಸ್ಥಿತಿ ಬಗ್ಗೆ ಅವರು ಪ್ರಾದೇಶಿಕ ಮಟ್ಟದ ಸಭೆ ನಡೆಸಲಿದ್ದಾರೆ. ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಸಭೆ ಯಶಸ್ಸಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಗೃಹ, ಐ.ಟಿ-ಬಿ.ಟಿ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಮುಖ್ಯಮಂತ್ರಿಯ ಪ್ರವಾಸ ಹಿನ್ನೆಲೆಯಲ್ಲಿ ಶನಿವಾರ ತಡರಾತ್ರಿ ಇಲ್ಲಿನ ಡಿ.ಸಿ. ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಮುಖ್ಯಮಂತ್ರಿಯ ಜೊತೆಗೆ ಉಪ ಮುಖ್ಯಮಂತ್ರಿ ಹಾಗೂ ಈ ಭಾಗದ ಸಚಿವರು, ಶಾಸಕರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಇತರ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸುವುದರಿಂದ ಗಣ್ಯರ ಭದ್ರತೆ, ವಸತಿ, ಊಟೋಪಚಾರ, ಶಿಷ್ಟಚಾರದಲ್ಲಿ ಯಾವುದೇ ರೀತಿಯ ಲೋಪವಾಗದಂತೆ ಜಾಗ್ರತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಸೂಪರ್ ಎಲ್ ನಿನೋ ಪರಿಣಾಮ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿನ ಪರಿಸ್ಥಿತಿ ಖುದ್ದು ಅರಿಯಲು ಸಿ.ಎಂ. ಪ್ರಾದೇಶಿಕ ಮಟ್ಟದ ಸಭೆ ಕರೆದಿದ್ದಾರೆ. ಇದಾದ ನಂತರ ಇತರ ವಿಭಾಗದ ಸಭೆ ನಡೆಸಲಾಗುತ್ತಿದೆ. ಹೀಗಾಗಿ ಈ ಸಭೆ ಇತರ ಸಭೆಗಳಿಗೆ ಮಾದರಿಯಾಗುವಂತೆ ಸರ್ವ ಸಿದ್ಧತೆ ಕೈಗೊಳ್ಳಬೇಕು. ತೀವ್ರ ಸವಾಲಿನ ಬರ ಪರಿಸ್ಥಿರಿ ಸಮರ್ಥ ನಿರ್ವಹಣೆ ಮತ್ತು ತೆಗೆದುಕೊಳ್ಳಬೇಕಾದ ಮುನ್ನಚ್ಚರಿಕೆ ಕ್ರಮಗಳೆ ಸಭೆಯ ಪ್ರಮುಖ ವಿಷಯವಾಗಿದೆ. ಹೀಗಾಗಿ ಸಭೆಯಲ್ಲಿ ಭಾಗವಹಿಸುವ ವಿಭಾಗ ಮಟ್ಟದ ಅಧಿಕಾರಿಗಳು ಏಳು ಜಿಲ್ಲೆಗಳ ಸಂಪೂರ್ಣ ಮಾಹಿತಿಯೊಂದಿಗೆ ಆಗಮಿಸಬೇಕು. ಸಿ.ಎಂ. ಡಿ.ಸಿ.ಎಂ ಸೇರಿದಂತೆ ಸಚಿವರು, ಶಾಸಕರು ಅಜೆಂಡಾ ಹೊರತಾಗಿಯೂ ಯಾವುದೇ ವಿಷಯ ಸಭೆಯಲ್ಲಿ ಪ್ರಸ್ತಾಪಿಸಿದಲ್ಲಿ ಕ್ಷಣಾರ್ಧದಲ್ಲಿ ಮಾಹಿತಿ ನೀಡಲು ಪೂರ್ವಸಿದ್ಧತೆಯೊಂದಿಗೆ ಬರಬೇಕೆಂದು ಅಧಿಕಾರಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಭೆಯಲ್ಲಿ ಈಶಾನ್ಯ ವಲಯದ ಡಿಐಜಿ ಪಿ.ಶಾಂತನು ಸಿನ್ಹಾ, ಜಿಲ್ಲಾಧಿಕಾರಿ ಇಕ್ರಮ್ ಶರೀಫ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್ಪಿ ಅಡ್ಡೂರು ಶ್ರೀನಿವಾಸುಲು, ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ಸಂಕನೂರ್, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಷ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಅನೇಕ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News