×
Ad

Kalaburagi | ಅಪ್ರಾಪ್ತೆಯ ಮೇಲಿನ ಅತ್ಯಾಚಾರ ಪ್ರಕರಣ: ಆರೋಪಿಗೆ 10 ವರ್ಷ ಜೈಲು ಶಿಕ್ಷೆ

Update: 2026-07-06 17:53 IST

ಸಾಂದರ್ಭಿಕ ಚಿತ್ರ (AI)

ಕಲಬುರಗಿ: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಆರೋಪಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಕಲಬುರಗಿಯ ವಿಶೇಷ ಪೋಕ್ಸೊ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ಸಬ್ ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯ ಕಮಲಾನಗರ ನಿವಾಸಿ ಹಾಗೂ ಆಟೋ ಚಾಲಕ ಗುಂಡಪ್ಪ ಗೋವಿಂದಪ್ಪ ಕುಶಾಳಕರ್ (26) ಎಂಬಾತ, 2024ರ ಮೇ 19ರಂದು ಬಾಲಕಿಯನ್ನು ಪುಸಲಾಯಿಸಿ ಸುಲ್ತಾನಪುರ ಕ್ರಾಸ್‌ಗೆ ಕರೆಸಿಕೊಂಡು, ಆಟೋದಲ್ಲಿ ಕಮಲಾಪುರದ ಖಾಸಗಿ ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದನು.

ಈ ಸಂಬಂಧ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಕಲಂ 363, 366(ಎ), 376(2)(ಎನ್) ಹಾಗೂ ಪೋಕ್ಸೊ ಕಾಯ್ದೆಯ ಕಲಂ 4, 6, 8 ಮತ್ತು 12ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸ್ ಇನ್‌ಸ್ಪೆಕ್ಟರ್ ಸಂತೋಷ ಎಲ್. ತಟ್ಟೆಪಳ್ಳಿ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಕಲಬುರಗಿಯ ಅಪರ ಜಿಲ್ಲಾ ಮತ್ತು ಸತ್ರ (ವಿಶೇಷ ಪೋಕ್ಸೊ) ನ್ಯಾಯಾಲಯ–ಎಫ್‌ಟಿಎಸ್‌ಸಿ-1ರ ನ್ಯಾಯಾಧೀಶ ಎಸ್.ಎಲ್. ಚವ್ಹಾಣ ಅವರು ಆರೋಪಿಯ ವಿರುದ್ಧದ ಅಪರಾಧವು ಸಾಕ್ಷ್ಯಾಧಾರಗಳಿಂದ ಸಾಬೀತಾಗಿದೆ ಎಂದು ತೀರ್ಮಾನಿಸಿದರು.

ನ್ಯಾಯಾಲಯವು ಪೋಕ್ಸೊ ಕಾಯ್ದೆಯ ಕಲಂ 4ರಡಿ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ. ದಂಡ, ದಂಡ ಪಾವತಿಸದಿದ್ದಲ್ಲಿ ಆರು ತಿಂಗಳ ಸರಳ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೆ, ಐಪಿಸಿ ಕಲಂ 363ರಡಿ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ. ದಂಡ, ದಂಡ ಪಾವತಿಸದಿದ್ದಲ್ಲಿ ಎರಡು ತಿಂಗಳ ಸರಳ ಜೈಲು ಶಿಕ್ಷೆ ವಿಧಿಸಿದೆ. ಎರಡೂ ದಂಡ ಸೇರಿ ಆರೋಪಿಗೆ ಒಟ್ಟು 50 ಸಾವಿರ ರೂ. ದಂಡ ವಿಧಿಸಲಾಗಿದೆ.

ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ಬಿ. ತುಪ್ಪದ ವಾದ ಮಂಡಿಸಿದ್ದರು. ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಸಬ್ ಅರ್ಬನ್ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರಭುರಾಜ, ಬ್ರಹ್ಮಾನಂದ ಹಾಗೂ ಅಮೃತರಾಜ್ ಪ್ರಮುಖ ಪಾತ್ರ ವಹಿಸಿದ್ದರು.

ಇದಲ್ಲದೆ, ನೊಂದ ಬಾಲಕಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ 5 ಲಕ್ಷ ರೂ. ಪರಿಹಾರ ಧನವನ್ನು ತೀರ್ಪಿನ ದಿನಾಂಕದಿಂದ ಒಂದು ತಿಂಗಳೊಳಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News