ಕಲಬುರಗಿಯಲ್ಲಿ ನೂತನ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಹಿಳೆಯರ, ವಿದ್ಯಾರ್ಥಿನಿಯರ ಸಾರ್ವಜನಿಕ ಸಭೆ
ಕಲಬುರಗಿ: ನಗರದ ಮೊಘಲ್ ಗಾರ್ಡನ್ ಫಂಕ್ಷನ್ ಹಾಲ್‌ನಲ್ಲಿ ನೂತನ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ವತಿಯಿಂದ ಆಯೋಜಿಸಿದ 'ವಕ್ಫ್ ಬಚಾವ್ ಸಂವಿಧಾನ ಬಚಾವ್' ಮಹಿಳೆಯರ ಮತ್ತು ವಿದ್ಯಾರ್ಥಿನಿಯರ ಸಾರ್ವಜನಿಕ ಪ್ರತಿಭಟನಾ ಸಭೆ ಜರುಗಿತು.
ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ ಮತ್ತು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಖಾಜಾ ಬಂದಾ ನವಾಜ್ ದರ್ಗಾದ ಸಜ್ಜಾದಾ ನಶೀನ್ ಡಾ.ಸೈಯದ್ ಅಲಿ ಅಲ್ ಹುಸೈನಿ ಅವರ ಸಹಯೋಗದೊಂದಿಗೆ ನಡೆದ ಪ್ರತಿಭಟನಾ ಸಭೆಯಲ್ಲಿ ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ ಖುದೋಸಾ ಸುಲ್ತಾನ ಮಾತನಾಡಿ, ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ತರುವ ಮೂಲಕ ಕೇಂದ್ರ ಸರ್ಕಾರವು ಕೋಟ್ಯಂತರ ರೂಪಾಯಿ ಮೌಲ್ಯದ ಅಮೂಲ್ಯ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಮತ್ತು ಮಾರಾಟ ಮಾಡುವ ಹುನ್ನಾರ ಮಾಡುತ್ತಿದೆ ಎಂದರು.
ಕರಾಳ ಕಾನೂನು, ಸ್ವೀಕಾರಾರ್ಹವಲ್ಲ ವಕ್ಫ್‌ನ ಶರಿಯಾ ಸ್ಥಿತಿ, ವಕ್ಫ್‌ನ ಆರಂಭ, ವಕ್ಫ್‌ನ ಉದ್ದೇಶಗಳು ಮತ್ತು ಪ್ರಯೋಜನಗಳು, ಸ್ವಾತಂತ್ರ್ಯದ ಮೊದಲು ಮತ್ತು ನಂತರ ಭಾರತದಲ್ಲಿ ವಕ್ಫ್‌ನ ಪರಿಸ್ಥಿತಿ, ವಕ್ಫ್‌ನ ಶರಿಯಾ ಮತ್ತು ಕಾನೂನು ಪರಿಭಾಷೆ, ವಕ್ಫ್ ಆಸ್ತಿಗಳ ಪ್ರಕಾರಗಳು ಮತ್ತು ಅವುಗಳ ಬಳಕೆ ಮತ್ತು ರಕ್ಷಣೆ, ವಕ್ಫ್ ಕಾನೂನುಗಳಲ್ಲಿ ಇದುವರೆಗೆ ಮಾಡಿದ ತಿದ್ದುಪಡಿಗಳು ತಿಳಿಸಿದ ಅವರು, ವಕ್ಫ್‌ನ ಕಲ್ಯಾಣ ವ್ಯವಸ್ಥೆಯನ್ನು ಹಾಳುಮಾಡಲು ಕೇಂದ್ರ ಸರ್ಕಾರವು ವಕ್ಫ್ ತಿದ್ದುಪಡಿ ಮಸೂದೆ 2025 ಅನ್ನು ಜಾರಿಗೆ ತರಲು ಬಯಸುತ್ತದೆ ಎಂದು ಕೇಂದ್ರ ಸರಕಾರದ ಆಕ್ರೋಶ ಹೊರಹಾಕಿದರು.
ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಮಹಿಳಾ ಸಂಚಾಲಕಿ ಜಲೀಸಾ ಸುಲ್ತಾನಾ ಯಾಸಿನ್ ಮಾತನಾಡಿ, ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ನಂತರ ಮುಸ್ಲಿಮರು ವಕ್ಫ್ ಆಸ್ತಿಗಳಲ್ಲಿ ಯಾವುದೇ ಆಸ್ತಿಯನ್ನು ದಾನ ಮಾಡಲು ಅಥವಾ ಪ್ರಯೋಜನ ಪಡೆಯಲು ಸಾಧ್ಯವಾಗುವುದಿಲ್ಲ ಮತ್ತು ವಕ್ಫ್ ಭೂಮಿಯಲ್ಲಿರುವ ಮಸೀದಿಗಳು, ಮದರಸಾಗಳು, ದರ್ಗಾಗಳು, ಅಶುರಾಖಾನಗಳು, ಸ್ಮಶಾನಗಳು, ಅನಾಥಾಶ್ರಮಗಳು, ಮದರಸಾಗಳು, ಶಾಲೆಗಳು, ಕಾಲೇಜುಗಳ ಅಸ್ತಿತ್ವವು ಅಪಾಯಕ್ಕೆ ಸಿಲುಕುತ್ತವೆ. ನೂತನ ಕಾಯ್ದೆಯ ಪ್ರಕಾರ ವಕ್ಫ್ ಆಸ್ತಿಗಳನ್ನು ಅಕ್ರಮವಾಗಿ ಆಕ್ರಮಿಸಿಕೊಂಡವರು ವಕ್ಫ್ ಆಸ್ತಿಗಳ ಮಾಲಕರಾಗುತ್ತಾರೆ. ಇದು ಬಹಳ ಕಳವಳಕಾರಿ ವಿಷಯವಾಗಿದೆ ಎಂದು ವಿಷಾದಿಸಿದರು.
ಜಮಾಅತೆ ಇಸ್ಲಾಮಿ ಹಿಂದ್‌ನ ಮಾಜಿ ಕಾರ್ಯದರ್ಶಿ ನಾಸಿರಾ ಖಾನಮ್, ತೆಹ್ರೀಕ್-ಎ-ನಿಸಾ ಗುಲ್ಬರ್ಗಾದ ಸದಸ್ಯೆ ಶಹನಾಜ್ ಅಖ್ತರ್ ಸ್ವಾಗತಿಸಿ, ಜಮಾಅತೆ ಇಸ್ಲಾಮಿ ಹಿಂದ್ ಗುಲ್ಬರ್ಗಾದ ಡಾ.ರೈಸಾ ಫಾತಿಮಾ, ಇಸ್ರಾ ಕೌಸರ್, ಕಲಬುರಗಿಯ ಕೆಬಿಎನ್ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಮುಖ್ಯಸ್ಥೆ ಮತ್ತು ವಕೀಲೆ ಡಾ.ಲುಬ್ನಾ ತನ್ವೀರ್ ಮಾತನಾಡಿದರು.
ಹಮೀದ್ ಪ್ಯಾರೆ ಶೈಕ್ಷಣಿಕ ಟ್ರಸ್ಟ್‌ನ ಮುಖ್ಯ ಟ್ರಸ್ಟಿ ಡಾ.ರಬಿಯಾ ಖಾನಮ್, ಜಮಿಯತ್-ಉಲ್-ಸಲಿಹಾತ್‌ನ ಮುಖ್ಯೋಪಾಧ್ಯಾಯಿನಿ ಅಲಿಯಾ ತಹಾನಿತ್, ಗುಲ್ಬರ್ಗದ ಮೆಹ್ಫಿಲ್-ಎ-ನಿಸಾದ ಕಾರ್ಯದರ್ಶಿ ಡಾ.ಕೌಸರ್ ಪರ್ವೀನ್, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಕಲಬುರಗಿಯ ಸಂಚಾಲಕ ಡಾ.ಮುಹಮ್ಮದ್ ಅಸ್ಗರ್ ಚಲ್ಬುಲ್, ಜಮಾಅತೆ ಇಸ್ಲಾಮಿ ಹಿಂದ್ ಗುಲ್ಬರ್ಗಾದ ನಾಝಿಮ್, ಸಿಟಿಜನ್ಸ್ ಲೀಗಲ್ ಅಕಾಡೆಮಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಅಬ್ದುಲ್ ಜಬ್ಬಾರ್ ಗೋಲಾ, ಮೌಲಾನಾ ಘೌಸುದ್ದೀನ್ ಖಾಸ್ಮಿ, ಮೌಲಾನಾ ಸೈಯದ್ ಅಝರ್ ಅಲಿ, ಅಫ್ಝಲ್ ಮಹಮೂದ್ ಖಾಝಿ, ಅಫ್ಝಲ್ ಮಹ್ಮದ್ ಖಾಜಿ, ರಾಬಿಯಾ ಖಾನಮ್, ನಾಸಿರಾ ಖಾನುಮ್, ವಾಜಿದಾ ಮುಬೀನ್ ಸೇರಿದಂತೆ ನೂರಾರು ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಇದ್ದರು.