×
Ad

ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳಿಂದ ಬಲವಂತದ ಸಾಲ ವಸೂಲಾತಿಗೆ ಬ್ರೇಕ್ ಹಾಕಿ : ಸಿಎಂ ಸಿದ್ದರಾಮಯ್ಯ

Update: 2025-02-15 21:38 IST

ಕಲಬುರಗಿ : ರಾಜ್ಯದಲ್ಲಿ ಸಾಲ ವಸೂಲಾತಿಗೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ಬಡ ಜನರಿಗೆ ನೀಡುತ್ತಿರುವ ಕಿರುಕುಳವನ್ನು ತಪ್ಪಿಸಲೆಂದೇ ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶ-2025 ಜಾರಿಗೆ ತಂದಿದ್ದು, ಇದನ್ನು ಕಟ್ಟುನಿಟ್ಟಾಗಿ ಜಿಲ್ಲೆಗಳಲ್ಲಿ ಜಾರಿಗೆ ತರುವ ಮೂಲಕ ಬಡಜನರಿಗೆ ಕಿರುಕುಳದಿಂದ ತಪ್ಪಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗಳ ಡಿ.ಸಿ., ಎಸ್.ಪಿ, ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದರು.

ಮೈಕ್ರೋ ಫೈನಾನ್ಸ್ ಸಂಸ್ಥೆಗಳ ನಿಯಂತ್ರಣ ಕುರಿತಂತೆ ಹೊರಡಿಸಲಾಗಿರುವ ಸುಗ್ರೀವಾಜ್ಞೆಯ ಅನುಷ್ಠಾನ ಕುರಿತಂತೆ ಮುಖ್ಯಮಂತ್ರಿಗಳು ಶನಿವಾರ ತಮ್ಮ ಗೃಹ ಕಚೇರಿಯಿಂದ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಪೊಲೀಸ್ ಆಯುಕ್ತರು, ಪ್ರಾದೇಶಿಕ ಆಯುಕ್ತರೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಮಾತನಾಡಿದರು.

ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ಬಲವಂತವಾಗಿ ಸಾಲ ವಸೂಲು ಮಾಡುತ್ತಿರುವುದರಿಂದ ಅಲ್ಲಲ್ಲಿ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಇವೆಲ್ಲದಕ್ಕೆ ಕಡಿವಾಣ ಹಾಕಬೇಕಿದೆ. ಸುಗ್ರಿವಾಜ್ಞೆ ಮುಂದಿನ ದಿನದಲ್ಲಿ ಕಾಯ್ದೆ ರೂಪ ಪಡೆದುಕೊಂಡು ನೀತಿ ನಿಯಮಗಳು ಬರಲಿವೆ. ಇದರಲ್ಲಿ ಡಿ.ಸಿ., ಎಸ್.ಪಿ ಅವರಿಗೆ ಹೆಚ್ಚಿನ ಅಧಿಕಾರ ನೀಡಲಾಗಿದ್ದು, ಅಧಿಕಾರಿಗಳು ಜವಾಬ್ದಾರಿ ಅರಿತು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.

ರಾಜ್ಯದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಮಾತನಾಡಿ, ಮೈಕ್ರೋ ಫೈನಾನ್ಸ್ ನಿಯಂತ್ರಣಕ್ಕೆ ಇದೇ ಫೆ.12 ರಿಂದ ಸುಗ್ರೀವಾಜ್ಞೆ ರಾಜ್ಯದಲ್ಲಿ ಜಾರಿಯಾಗಿರುವುದರಿಂದ ಈ ಸಂಬಂಧ ಜಿಲ್ಲೆಗಳಲ್ಲಿ ಹೆಚ್ಚು ಪ್ರಚಾರ ಕಾರ್ಯ ಕೈಗೊಳ್ಳಬೇಕು. ನೊಂದವರು ದೂರು ಸಲ್ಲಿಸಲು ಸಹಾಯವಾಣಿ ವ್ಯವಸ್ಥೆ ಮಾಡಬೇಕು. ದೂರು ಬಂದಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗಬೇಕು ಎಂದರು.

ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಮಾತನಾಡಿ, ಜಿಲ್ಲೆಯಲ್ಲಿ ಈ ಸಂಬಂಧ ಇದೂವರೆಗೆ ವರದಿಯಾದ 21 ಪ್ರಕರಣಗಳನ್ನು ವಿಚಾರಣೆ ಮಾಡಿ ವಿಲೇವಾರಿ ಮಾಡಲಾಗಿದೆ. ಕಲಬುರಗಿ ನಗರದ ಸ್ಟೇಷನ್ ಬಜಾರ್, ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ತಲಾ 1 ಎಫ್.ಐ.ಆರ್. ದಾಖಲಾಗಿದೆ. ಜಿಲ್ಲೆಯಾದ್ಯಂತ 783 ಹಣಕಾಸು ಸಂಸ್ಥೆಗಳು ಕರ್ನಾಟಕ ಮನೀ ಲೆಂಡಿಂಗ್ ಕಾಯ್ದೆಯಲ್ಲಿ ನೊಂದಣಿ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಬೆಂಗಳೂರಿನಿಂದ ಮುಖ್ಯಮಂತ್ರಿಗಳ ಜೊತೆಗೆ ಕಾನೂನು ಸಂಸದೀಯ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್‌, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ, ಸಂಸದ ಕುಮಾರ ನಾಯಕ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಸರ್ಕಾರದ ಕಾರ್ಯದರ್ಶಿ ಕಾವೇರಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಉಪಸ್ಥಿತರಿದ್ದರು.

ಇತ್ತ ಕಲಬುರಗಿಯಿಂದ ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಕಾರ ಇಲಾಖೆಯ ಸಹಾಯಕ ನಿಬಂಧಕ ಸಂಜಯ್ ಇದ್ದರು.

 

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News