×
Ad

ಬಾಲ್ಯ ವಿವಾಹ ಚಟುವಟಿಕೆಗಳಲ್ಲಿ ತೊಡಗಿದವರ ವಿರುದ್ಧ ಪ್ರಕರಣ ದಾಖಲಿಸಿ : ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್

Update: 2025-05-21 20:42 IST

ಕಲಬುರಗಿ : ಬಾಲ್ಯ ವಿವಾಹ ಚಟುವಟಿಕೆಗಳಲ್ಲಿ ತೊಡಗಿದ ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಿ, ಕಾನೂನು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬುಧುವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರಿಗಳು ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗದೇ ಪೋಕ್ಸೋ ಪ್ರಕರಣ ಮತ್ತು ಬಾಲ್ಯವಿವಾಹ ಪ್ರಕರಣಗಳು ನೋಂದಾಯಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಜನವರಿಯಿಂದ ಎಪ್ರಿಲ್ ವರೆಗೆ ಕಲಬುರಗಿ ನಗರದಲ್ಲಿ ದಾಖಲಾದ ಪೋಕ್ಸೋ ಪ್ರಕರಣಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಇಷ್ಟೊಂದು ಪೋಕ್ಸೋ ಪ್ರಕರಣಗಳು ಕಡಿಮೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

2024-25ನೇ ಸಾಲಿನ ಜನವರಿಯಿಂದ ಎಪ್ರಿಲ್ ವರೆಗಿನ ಬಾಲ್ಯವಿವಾಹ ಪ್ರಕರಣಗಳ ಕುರಿತು ಅಫಜಲಪೂರ 4, ಆಳಂದ 7, ಚಿತ್ತಾಪೂರ 5, ಶಹಾಬಾದ 3, ಸೇಡಂ 4, ಕಲಬುರಗಿ ನಗರ 3, ಕಲಬುರಗಿ ಗ್ರಾಮೀಣ 7 ಚಿಂಚೋಳಿ 2, ಜೇವರ್ಗಿ 8, ಒಟ್ಟು 43 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳಲ್ಲಿ ಪೋಕ್ಸೋ ಕುರಿತು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದರ ಮುಖಾಂತರ ವಿದ್ಯಾರ್ಥಿಗಳು ಯಾವುದೇ ಅಪರಾಧದಲ್ಲಿ ತೊಡಗದಂತೆ ಕ್ರಮಕೈಗೊಳ್ಳಬೇಕೆಂದು ಹೇಳಿದರು.

ಕಲಬುರಗಿ ನಗರದಲ್ಲಿ ಒಟ್ಟು 12 ಪ್ರಕರಣ ದಾಖಲಾಗಿದ್ದು, ತನಿಖಾ ಹಂತದ ಪ್ರಗತಿಯಲ್ಲಿದೆ. ಪೋಲಿಸ್ ಇಲಾಖೆಯಿಂದ ಚಾರ್ಜಶೀಟ್ ನ್ಯಾಯಾಲಕ್ಕೆ ಸಲ್ಲಿಸಿದ್ದು, ಪ್ರಕರಣ ತನಿಖಾ ಹಂತದಲ್ಲಿದೆ ಎಂದು ಅಧಿಕಾರಿಗಳು ಹೇಳಿದರು.

ಮಕ್ಕಳ ಕಲ್ಯಾಣ ಸಮಿತಿ :

ಬಾಲ್ಯ ವಿವಾಹ, ಲೈಂಗಿಕ ದೌರ್ಜನ್ಯ, ಮನೆಯಿಂದ ಓಡಿ ಬಂದ ಮಕ್ಕಳು, ಬಾಲ ಕಾರ್ಮಿಕರು, ಭಿಕ್ಷಾಟನೆ ಮಕ್ಕಳು, ಅನಾಥ ಮಕ್ಕಳು, ಏಕಪೋಷಕರ ಮಕ್ಕಳು, ಒಪ್ಪಿಸಲ್ಪಟ್ಟ ಇತರೆ ಹಿಂದಿನ ಸಾಲಿನ ಬಾಕಿ ಇರುವ 20 ಪ್ರಕರಣ ಕುರಿತು ಮಾಹಿತಿ ನೀಡಿದರು. 

ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಸ್ಥಾಪಿಸಿದ ಚೈಲ್ಡ್‍ಲೈನ್ 1098/112 ಸಹಾಯವಾಣಿ ಸಂಖ್ಯೆಯ ಕುರಿತು ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳಲ್ಲಿ ನಾಮಫಲಕ ಅಥವಾ ಪೋಸ್ಟರ್ ಗಳನ್ನು ಅಂಟಿಸುವುದರ ಮುಖಾಂತರ ಮಾಹಿತಿಯನ್ನು ನೀಡಬೇಕೆಂದು ಎಂದು ಹೇಳಿದರು.

2024 ರಿಂದ ಏಪ್ರಿಲ್ 2025 ಈ ಸಹಾಯವಾಣಿ ಸಂಖ್ಯೆಯಿಂದ ಒಟ್ಟು 237 ಕರೆಗಳು ಬಂದಿದ್ದು, ಸಹಾಯವಾಣಿ ಸಂಖ್ಯೆಗೆ ಬಂದ ಎಲ್ಲಾ ಕರೆಗಳನ್ನು ಸ್ವೀಕರಿಸಿ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಲು ಸಹಾಯವಾಣಿ ಸಂಖ್ಯೆ ಸಹಾಯವಾಗಿದೆ ಎಂದು ಅಧಿಕಾರಿ ತಿಳಿಸಿದರು.

ದತ್ತು ಮಕ್ಕಳ ಪ್ರಕ್ರಿಯೆಯ ಸಂಪೂರ್ಣ ಆನ್‍ಲೈನ್ ಆಧಾರಿತವಾಗಿದ್ದು, www.cara.gov.in ಈ ವೆಬ್‍ಸೈಟ್‍ನಲ್ಲಿ ದತ್ತು ಮಕ್ಕಳನ್ನು ಪಡೆಯಲಿಚ್ಚಿಸುವ ಪಾಲಕರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದರು.

ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರನ್ನು ಒಗ್ಗೂಡಿಸಿ ಪ್ರತಿಯೊಬ್ಬರ ಸಹಾಯ ಸಹಕಾರದಿಂದ ಜನಜಾಗೃತಿ ಮೂಡಿಸಬೇಕೆಂದು ಅವರು ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀನಿವಾಸ ನವಲೆ ಮಾತನಾಡಿ, ಪೋಲಿಸ್ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂಧಿಸಿ ತಪ್ಪಿತಸ್ಥರ ವಿರುದ್ಧ ತರಿತ್ವವಾಗಿ ಕ್ರಮಕೈಗೊಳ್ಳಬೇಕು. ನೊಂದವರಿಗೆ ನ್ಯಾಯವನ್ನು ನೀಡುವಲ್ಲಿ ಪ್ರತಿಯೊಬ್ಬ ಅಧಿಕಾರಿಗಳು ದಕ್ಷತೆ ಹಾಗೂ ಪ್ರಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿ ಭಂವರ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಮಕ್ಕಳ ವಿಶೇಷ ಪೋಲಿಸ್ ಕಲ್ಯಾಣಾಧಿಕಾರಿ ಚಂದ್ರಶೇಖರ, ಅರ್.ಸಿ.ಹೆಚ್. ಅಧಿಕಾರಿ ಡಾ. ಸಿದ್ರಾಮಪ್ಪ ಪಾಟೀಲ, ಮಹಿಳಾ ಮತ್ತು ಕಲ್ಯಾಣ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಕುಮಾರ ರಾಠೋಡ, ಮಹಿಳಾ ರಕ್ಷಣಾ ಘಟಕದ ಅಧಿಕಾರಿ ಮಂಜುಳಾ ಪಾಟೀಲ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಶಿಶು ಯೋಜನಾ ಅಧಿಕಾರಿಗಳು,ಸ್ವಯಂ ಸೇವಾ ಸಂಘಗಳ ಸದಸ್ಯರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News