ಕಲಬುರಗಿ| ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ: ಸುರೇಶ ಅಕ್ಕಣ್ಣ
ಕಲಬುರಗಿ: ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಭಾರತದ ಚುನಾವಣಾ ಆಯೋಗ ಮತ್ತು ಜಿಲ್ಲಾ ಆಡಳಿತದಿಂದ ಚುನಾವಣೆ ಜಾಗೃತ ಕಾರ್ಯಕ್ರಮವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶ ಸುರೇಶ ಅಕ್ಕಣ್ಣ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ಈಶಾನ್ಯ ವಲಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ ನಿಮಿತ್ತ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಕಡ್ಡಾಯವಾಗಿ ನೋಂದಾಯಿಸಬೇಕೆಂದು ಕರೆ ನೀಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಅನಿವಾರ್ಯ, ಜಿಲ್ಲಾ ಆಡಳಿತ ನೇತೃತ್ವದಲ್ಲಿ ನೋಂದಣಿ ಕಾರ್ಯ ಪ್ರಾರಂಭಗೊಂಡಿದೆ. ನ. 6 ರಂದು ನೋಂದಣಿಗೆ ಕೊನೆಯ ದಿನವಾಗಿದೆ. ಅರ್ಹರಾದ ತಾವುಗಳು ಸಹ ನೋಂದಣಿ ಮಾಡಿಸಿ ಇತರರು ನೋಂದಾಯಿಸಿ ಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಷಣ ಸಿಂಗೆ, ಬಸವರಾಜ ಬಿರಾದಾರ, ದೇವೇಗೌಡ ಪಾಟೀಲ, ಧರ್ಮರಾಯ ಜವಳಿ, ರವೀಂದ್ರ ಸಜ್ಜಿ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಪಾಲ್ಗೊಂಡಿದ್ದರು.