ಕಲಬುರಗಿ ಡಿಸಿ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ : ಎನ್.ರವಿಕುಮಾರ್ ವಿರುದ್ಧ ಪ್ರಕರಣ ದಾಖಲಿಸುವಂತೆ ಮನವಿ
ಕಲಬುರಗಿ : ಕಲಬುರಗಿ ಜಿಲ್ಲಾಧಿಕಾರಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ, ಮಹಿಳಾ ಏಕತಾ ಮಂಚ್ ಸಂಘಟನೆಯ ಪದಾಧಿಕಾರಿಗಳು ನಗರದ ಆರ್.ಜಿ ನಗರ ಪೊಲೀಸ ಠಾಣೆಯ ಪಿ.ಐ ಅವರಿಗೆ ಮನವಿ ಸಲ್ಲಿಸಿ, ಒತ್ತಾಯಿಸಿದ್ದಾರೆ.
ಕಲಬುರಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ರವರಾದ ಫೌಝಿಯಾ ತರನ್ನಮ್ ಅವರ ವಿರುದ್ಧ ಬಿಜೆಪಿ ಎಂಎಲ್ಸಿ ರವಿಕುಮಾರ್ ಅವಹೇಳನಕಾರಿ ಹೇಳಿಕೆ ಸ್ವೀಕಾರಾರ್ಹವಲ್ಲ. ಈ ಜಿಲ್ಲಾಧಿಕಾರಿಗಳು, ಕಲಬುರಗಿ ಜಿಲ್ಲೆಯಲ್ಲಿ ಬಹಳಷ್ಟು ಕೆಲಸ ಮಾಡುತ್ತಿದ್ದಾರೆ, ಅನುಕರಣೀಯ ಟ್ರ್ಯಾಕ್ ರೆಕಾರ್ಡ್ ಮತ್ತು ಸಾರ್ವಜನಿಕ ಸೇವೆ ರಾಜ್ಯಕ್ಕೆ ಆಳವಾದ ಸಮರ್ಪಣೆ ಹೊಂದಿರುವ ನಿಷ್ಪಕ್ಷಪಾತ ಸಮಗ್ರತೆಯ ಅಧಿಕಾರಿಯಾಗಿದ್ದಾರೆ. ರಾಷ್ಟ್ರಪತಿ ಅವರುಗಳಿಂದ ಉತ್ತಮ ಚುನಾವಣಾ ನಿರ್ವಹಣೆ ಬಗ್ಗೆ ಪ್ರಶಸ್ತಿ ಪಡೆದಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಹೇಳಿಕೆ ನೀಡಿರುವ ಕೊಳಕು ಮನಸ್ಥಿತಿಯ ರವಿಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಬೇಕು ಒತ್ತಾಯಿಸಿದರು.
ದ್ವೇಷಪೂರಿತ ಆರೋಪಗಳನ್ನು ಮಾಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿರುವ ಅಪಮಾನ ಹಾಗೂ ಕೋಮು ರಾಜಕೀಯಕ್ಕೆ ಹಿಡಿದ ಕನ್ನಡಿಯಾಗಿದೆ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಒಬ್ಬ ಐ.ಎ.ಎಸ್ ಅಧಿಕಾರಿಯವರನ್ನು "ಪಾಕಿಸ್ತಾನಿ" ಎಂದು ಕರೆದಿರುವುದು ಆಘಾತಕಾರಿ ಹಾಗೂ ದ್ವೇಷ ಹುಟ್ಟಿಸುವ ಅಪಾಯಕಾರಿ ನಡೆಯಾಗಿದೆ. ಇದನ್ನು ಮಹಿಳಾ ಏಕತಾ ಮಂಚ್ ಸಂಘಟನೆ ಖಂಡಿಸುತ್ತದೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಅಧ್ಯಕ್ಷೆ ಶೇಖ್ ಸಮರಿನ, ಗೌರವಾಧ್ಯಕ್ಷ ಸೈರಾಬಾನು, ಕಾರ್ಯಾಧ್ಯಕ್ಷೆ ಸೈಯದಾ ತಹೇನಿಯತ್ ಫಾತಿಮಾ, ಅಕ್ತರ ಪರವೀನ, ಶಾಹಿನ ಬೇಗಂ, ಆಮಿನಾ ಪಟೇಲ, ಬೈರುನಿಸಾ ಬೇಗಂ, ಬಸಿರತ್ ಬೇಗಂ, ಮುನ್ನಿ ಬೇಗಂ, ಬಿಲಾ ಬೇಗಂ, ಫೌಝಿಯಾ ಬೇಗಂ, ಶಹಿನಾಜ ಬೇಗಂ ಸೇರಿದಂತೆ ಮತ್ತಿತರರಿದ್ದರು.